ರಾಜ್ಯದಲ್ಲಿ ಕೊರೊನಾ ಇಳಿಮುಖ: ೧೬,೦೬೮ ಪ್ರಕರಣ ಪತ್ತೆ
ಬೆಂಗಳೂರು, ಜೂ. ೪: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು ಇಂದು ೧೬,೦೬೮ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೨೬,೬೯,೫೧೪ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೩೬೪ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೦,೮೯೫ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೩,೨೨೧ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೭೭,೪೯೬ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೨೦೬ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೨೨,೩೧೬ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೩,೫೮,೪೧೨ಕ್ಕೆ ಏರಿಕೆಯಾಗಿದೆ. ಇನ್ನು ೨,೮೦,೧೮೬ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೫೦,೬೧೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧೬,೦೬೮ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧೦.೬೬ಕ್ಕೆ ಇಳಿದಿದೆ.
ಕರ್ನಾಟಕದ ಮಾಲೂರಿನಲ್ಲಿ ‘ಕೋವ್ಯಾಕ್ಸಿನ್' ಲಸಿಕೆ ಉತ್ಪಾದನೆ
ಬೆಂಗಳೂರು, ಜೂ. ೪: ಮಾರಕ ಕೊರೊನಾ ವೈರಸ್ ಸೋಂಕಿಗೆ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಇನ್ನು ಮುಂದೆ ಕರ್ನಾಟಕದಲ್ಲೇ ಉತ್ಪಾದನೆಯಾಗಲಿದ್ದು, ಈ ಸಂಬAಧ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ಪಡೆದಿದೆ. ಈ ಹಿಂದೆಯೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭಾರತ್ ಬಯೋಟೆಕ್ ಈ ಸಂಬAಧ ಅರ್ಜಿ ಸಲ್ಲಿಕೆ ಮಾಡಿತ್ತಾದರೂ, ತಾಂತ್ರಿಕವಾಗಿ ಆರ್ಜಿ ಊರ್ಜಿತವಾಗಿರಲಿಲ್ಲ. ಹೀಗಾಗಿ ಭಾರತ್ ಬಯೋಟೆಕ್ ಸಂಸ್ಥೆ ಮತ್ತೊಂದು ಹೊಸ ಅರ್ಜಿ ಸಲ್ಲಿಸಿ ಈ ಅನುಮೋದನೆ ಪಡೆದಿದೆ ಎನ್ನಲಾಗಿದೆ. ತುರ್ತು ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಶೀಘ್ರವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಭಾರತ್ ಬಯೋಟೆಕ್ ಸಂಸ್ಥೆ ಮನವಿಗೆ ಸ್ಪಂದಿಸಿದೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಲೋಕಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಭಾರತ್ ಬಯೋಟೆಕ್ ಸಂಸ್ಥೆಯ ಅರ್ಜಿಯನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿ ಮಾಲೂರು ಲಸಿಕೆ ತಯಾರಿಕಾ ಘಟಕ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಮಾಲೂರಿನಲ್ಲಿ ಪ್ರಸ್ತುತ ಪ್ರಾಣಿಗಳ ಕಾಲು-ಬಾಯಿ ರೋಗದ ಲಸಿಕೆ ತಯಾರಿಸಲಾಗುತ್ತಿದ್ದು, ಇದೀಗ ಇಲ್ಲಿ ಕ್ಯೋವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ.
ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ
ದಾವಣಗೆರೆ, ಜೂ. ೪: ಕೊರೊನಾ ಸೋಂಕಿನ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕೊರೊನಾ ಸೋಂಕಿತರು ಉಳಿದುಕೊಂಡಿರುವ ದಾವಣಗೆರೆಯ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಶಾಸಕ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದಾರೆ. ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಲು, ಅವರಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿAದ ಮೂರು ದಿನಗಳ ಕಾಲ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ ಮಾಡಿ ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬುವುದರ ಜೊತೆಗೆ ನಿಮ್ಮೊಂದಿಗೆ ನಾನಿದ್ದೇನೆಂದು ಮನೋಬಲ ತುಂಬಲು ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಕೋವಿಡ್-೧೯: ಚೆನ್ನೈನಲ್ಲಿ ಸಿಂಹಿಣಿ ಸಾವು
ಚೆನ್ನೈ, ಜೂ. ೪: ವಂಡಲೂರಿನ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದಲ್ಲಿ ೯ ವರ್ಷದ ಸಿಂಹಿಣಿ ನೀಲಾ ಕೋವಿಡ್-೧೯ ಸೋಂಕಿನಿAದ ಸಾವನ್ನಪ್ಪಿದ್ದು, ಇತರ ಎಂಟು ಸಿಂಹಗಳಿಗೆ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಪ್ರಾಣಿ ಸಂಗ್ರಹಾಲಯದ ಸಫಾರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಿಂಹಿಣಿ ಗುರುವಾರ ಸಂಜೆ ೬-೧೫ ರಲ್ಲಿ ಮೃತಪಟ್ಟಿದೆ. ಮೃತ ಸಿಂಹಿಣಿಗೆ ರೋಗಲಕ್ಷಣವಿಲ್ಲ ಮತ್ತು ಬುಧವಾರ ಮೂಗಿನಿಂದ ವಿಸರ್ಜನೆ ಮಾತ್ರ ಕಂಡುಬAದಿತ್ತು ಕೂಡಲೇ ಚಿಕಿತ್ಸೆ ನೀಡಲಾಗಿತ್ತು ಎಂದು ಶುಕ್ರವಾರ ಪ್ರಾಣಿ ಸಂಗ್ರಹಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಮೇ ೨೬ ರಂದು ಸಫಾರಿ ಪ್ರದೇಶದಲ್ಲಿನ ಐದು ಸಿಂಹಗಳಿಗೆ ಹಸಿವಿನ ಕೊರತೆ ಹಾಗೂ ಸಾಂದರ್ಭಿಕ ಕೆಮ್ಮು ಬರುತ್ತಿತ್ತು. ಪ್ರಾಣಿ ಸಂಗ್ರಹಾಲಯದ ಪಶು ವೈದ್ಯರ ತಂಡ ಕೂಡಲೇ ವಿಚಾರಣೆ ನಡೆಸಿ, ಶಿಷ್ಟಾಚಾರದ ಪ್ರಕಾರ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದರು ಎಂದು ಪ್ರಾಣಿ ಸಂಗ್ರಹಾಲಯ ತಿಳಿಸಿದೆ. ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲು ಸಂಗ್ರಹಾಲಯದಲ್ಲಿನ ಪಶುವೈದ್ಯರನ್ನು ಸೇರಲು ನಮ್ಮ ಮನವಿ ಮೇರೆಗೆ ತಮಿಳುನಾಡು ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವ ವಿದ್ಯಾ ನಿಲಯದಿಂದ ತಜ್ಞರ ತಂಡವನ್ನು ನಿಯೋಜಿಸಿದೆ. ರಕ್ತದ ಮಾದರಿಯನ್ನು ತಮಿಳುನಾಡು ಪಶು ವೈದ್ಯಕೀಯ ಪ್ರಾಣಿ ವಿಜ್ಞಾನ ವಿಶ್ವವಿದ್ಯಾನಿಲಯ-ಟಿಎಎನ್ ಯುವಿಎಎಸ್ ಮತ್ತು ೧೧ ಸಿಂಹಗಳ ಮೂಗಿನ ಸ್ವಾಬ್, ಮಲದ ಮಾದರಿಯನ್ನು ಭೂಪಾಲ್, ಮಧ್ಯ ಪ್ರದೇಶದಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಡಿಸೀಸ್ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯೋಗಾಲಯ ಪರೀಕ್ಷೆ ಪ್ರಕಾರ, ೧೧ ಸಿಂಹಗಳ ಪೈಕಿ ೯ ಸಿಂಹಗಳ ಮಾದರಿಯಲ್ಲಿ ಸಾರ್ಸ್ ಕೋವ್-೨ ಪಾಸಿಟಿವ್ ದೃಢಪಟ್ಟಿದೆ.
ಕೆ.ಎಸ್.ಆರ್.ಟಿ.ಸಿ. ವಿವಾದ: ಸತ್ಯಕ್ಕೆ ದೂರವಾದ ವರದಿ
ಬೆಂಗಳೂರು, ಜೂ. ೪: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ಕೆಎಸ್ಆರ್ಟಿಸಿ ಎಂದು ಬಳಸುವಂತಿಲ್ಲವೆAದು, ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊAಡAತಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ. ಇದು ವಸ್ತುಷಃ ಸತ್ಯಕ್ಕೆ ದೂರವಾದ ವರದಿಯಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರತಿಕ್ರಿಯಿಸಿದ್ದಾರೆ. ಸಂಸ್ಥೆಯು ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ರವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶವನ್ನು ಇಂದಿನವರೆಗೂ ಸ್ವೀಕರಿಸಿರುವುದಿಲ್ಲ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ.ಎಸ್.ಆರ್.ಟಿ.ಸಿ.ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣ ಪತ್ರದ ವಿರುದ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ(ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ. ಏತನ್ಮಧ್ಯೆ, ಸದರಿ ಮಂಡಳಿಯನ್ನು ದಿ. ೪.೪.೨೦೨೧ ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕೆಎಸ್ಆರ್ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್ಆರ್ಟಿಸಿಯು ತನಗೆ ನೀಡಲಾಗಿರುವ ಟ್ರೇಡ್ಮಾರ್ಕ್ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆ.ಎಸ್.ಆರ್.ಟಿ.ಸಿ. ಟ್ರೇಡ್ ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಆದೇಶ ಮತ್ತು ನಿಷೇಧವಿರುವುದಿಲ್ಲ. ಕೇರಳ ಎಸ್ಆರ್ಟಿಸಿಯು, ಕೆ.ಎಸ್.ಆರ್.ಟಿ.ಸಿ. / ಕರ್ನಾಟಕ ಸರ್ಕಾರಕ್ಕೆ ನೋಟೀಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟೀಸ್ ನೀಡಿದರೆ, ಸಂಸ್ಥೆಯಿAದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ. ಏತನ್ಮಧ್ಯೆ, ಪತ್ರಿಕೆಗಳಲ್ಲಿ ಈ ರೀತಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆಯೆನ್ನಲಾದ ಸತ್ಯಕ್ಕೆ ದೂರವಾದ ಹಾಗೂ ಕಾನೂನಾತ್ಮಕವಲ್ಲದ ವರದಿಗಳನ್ನು ಪ್ರಕಟಿಸದಂತೆ ವಿನಂತಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮಗಳನ್ನು ಜರುಗಿಸುವ ನಮ್ಮ ಹಕ್ಕನ್ನು ಸಂಸ್ಥೆಯು ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ.