ಬೆಂಗಳೂರು, ಜೂ. ೩: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈಗ ಇರುವ ಲಾಕ್‌ಡೌನ್ ನಿಯಮಗಳು ತಾ.೧೪ ರವರಗೆ ಯಥಾಸ್ಥಿತಿ ಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಯಡಿಯೂರಪ್ಪ, ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ನಿಯಮಗಳಲ್ಲಿ ಸದ್ಯಕ್ಕೆ ಯಾವುದೇ ಸಡಿಲಿಕೆ, ಬದಲಾವಣೆಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದೇ ವೇಳೆ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಹೊಟೇಲ್‌ಗಳಿಂದ ಪಾರ್ಸಲ್ ಪಡೆಯುವುದಕ್ಕೆ, ರಫ್ತು ಮಾಡುವುದಕ್ಕೆ ಅಗತ್ಯವಿರುವ ಚಟುವಟಿಕೆಗಳಿಗೆ ನಿರ್ಬಂಧವನ್ನು ಸಡಿಲಿಸಲಾಗಿದೆ. ರೂ ೫೦೦ ಕೋಟಿ ಪ್ಯಾಕೇಜ್ ಘೋಷಣೆಇನ್ನು ಇದೇ ವೇಳೆ ಕೋವಿಡ್-೧೯ ನಿಂದ ಸಂಕಷ್ಟಕ್ಕೀಡಾಗಿರುವ ವಿವಿಧ ವಲಯಗಳಿಗೆ ಒಟ್ಟು ೫೦೦ ಕೋಟಿ ರೂಪಾಯಿ ಸಿಎಂ ಪರಿಹಾರ ಪ್ಯಾಕೇಜ್‌ನ್ನೂ ಘೋಷಣೆ ಮಾಡಿದ್ದಾರೆ.

ಮೀನುಗಾರರಿಗೆ ರೂ. ೩ ಸಾವಿರ, ಪವರ್ ಲೂಮ್ ನೇಕಾರರಿಗೆ ರೂ. ೩ ಸಾವಿರ, ಅಂಗನವಾಡಿ ಸಹಾಯಕರಿಗೆ ರೂ. ೨ ಸಾವಿರ, ಅನುದಾನರಹಿತ ಶಿಕ್ಷಕರಿಗೆ ರೂ. ೫ ಸಾವಿರ, ಖಾಸಗಿ ಶಿಕ್ಷಕರಿಗೆ ರೂ. ೫ ಸಾವಿರ, ಆಶಾ ಕಾರ್ಯಕರ್ತೆಯರಿಗೆ ರೂ. ೩ ಸಾವಿರ, ಇಮಾಮ್, ಮೌಲ್ವಿಗಳಿಗೆ ರೂ. ೩ ಸಾವಿರ, ಸಿನಿಮಾ ಕಾರ್ಮಿಕರಿಗೆ ರೂ. ೩ ಸಾವಿರ, ಕಿರುತೆರೆ ಕಲಾವಿದರಿಗೆ ರೂ. ೩ ಸಾವಿರ, ‘ಸಿ’ ವರ್ಗದ ಮುಜರಾಯಿ ಇಲಾಖೆ ಅಡುಗೆ ಭಟ್ಟರಿಗೆ ರೂ. ೩ ಸಾವಿರ, ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರಿಗೆ ರೂ. ೩ ಸಾವಿರ ಸಹಾಯಧನ ಘೋಷಿಸಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಅರ್ಧ ಕೆಜಿ ಹಾಲಿನ ಪುಡಿ ನೀಡಲು ಕ್ರಮಕೈಗೊಳ್ಳಲಾಗಿದೆ. ನ್ಯಾಯವಾದಿಗಳ ಪರಿಹಾರ ನಿಧಿಗೆ ರೂ. ೫ ಕೋಟಿ ನೀಡಲು ಸರಕಾರ ತೀರ್ಮಾನ ಕೈಗೊಂಡಿದೆ.

ಕೈಗಾರಿಕೆಗಳಿಗೆ ಪರಿಹಾರ

ಎಂಎಸ್‌ಎAಇ ಕೈಗಾರಿಕೆಗಳಿಗೆ ಮೇ ಮತ್ತು ಜೂನ್ ತಿಂಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕಗಳನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗುವುದು. ಇದರಿಂದ ಸರಕಾರದ ಬೊಕ್ಕಸಕ್ಕೆ ರೂ, ೧೧೪.೭೦ ಕೋಟಿ ಹೊರೆಯಾಗಲಿದೆ ಎಂದು ಸಿಎಂ ತಿಳಿಸಿದರು.

ಎಂಎಸ್‌ಎAಯ ಕೈಗಾರಿಕೆ ಹೊರತುಪಡಿಸಿ ಇತರ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ ತಿಂಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕ ಪಾವತಿಸುವುದನ್ನು ಜುಲೈ ೩೦ರವರಗೆ ಮುಂದೂಡಲಾಗುವುದು. ಈ ಎರಡು ಕ್ರಮಗಳಿಂದ ಸುಮಾರು ರೂ. ೩ ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿವೆ ಎಂದು ತಿಳಿಸಿದ್ದಾರೆ.