ಗೋಣಿಕೊಪ್ಪಲು, ಜೂ. ೨: ಕೊರೊನಾ ತಂದ ಸಂಕಷ್ಟ ಒಂದೇ, ಎರಡೇ, ಹಲವಾರು ತೊಂದರೆ ಗಳನ್ನು ತಂದೊಡ್ಡಿರುವ ಕೊರೊನಾ ದಿಂದಾಗಿ ಇಡೀ ರಾಜ್ಯ ಲಾಕ್‌ಡೌನ್ ಆಗಿದೆ. ಇದರಿಂದಾಗಿ ಹಲವರ ಬದುಕನ್ನು ಅತಂತ್ರಗೊಳಿಸಿದೆ. ಇದರಲ್ಲಿ ಹೈನುಗಾರಿಕೆಯೂ ಹೊರತಾಗಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿರುವ ಅತಿ ಸಣ್ಣ ರೈತರು ಪ್ರತಿನಿತ್ಯ ತಮ್ಮ ಹಸುಗಳಿಂದ ಬರುವ ಹಾಲನ್ನು ನಗರ ಪ್ರದೇಶದ ಹೊಟೇಲ್‌ಗಳಿಗೆ ನೀಡಿ ಇದರಿಂದ ಬರುವ ಆದಾಯದಿಂದಲೇ ತಮ್ಮ ಕುಟುಂಬ ನಿರ್ವಹಣೆ ನಡೆಸುತ್ತಿದ್ದರು.

ಕೊರೊನಾ ಎರಡನೇ ಅಲೆಯಿಂದಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮ ಹೊಟೇಲ್‌ಗಳು, ಬೇಕರಿಗಳು ಬಾಗಿಲು ಮುಚ್ಚಿದವು. ಇದರಿಂದ ತನ್ನ ಹಸುಗಳು ನೀಡುವ ಗುಣಮಟ್ಟದ ಹಾಲನ್ನು ಕೊಂಡುಕೊಳ್ಳುವವರು ಇಲ್ಲದಾಗಿದೆ.

ಮನೆಯ ಅಕ್ಕಪಕ್ಕದ ಮನೆಗಳಿಗೆ ಮಾರಾಟ ಮಾಡೋಣವೆಂದರೆ, ಅಲ್ಲಿಯೂ ಕೂಡ ಹಾಲನ್ನು ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ಹೈನುಗಾರಿಕೆಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುವವರ ಬದುಕಿಗೆ ಕೊರೊನಾ ಕರಿನೆರಳು ಕವಿದಿದೆ.

ಲಾಕ್‌ಡೌನ್‌ನಿಂದ ಪಟ್ಟಣಕ್ಕೆ ತೆರಳಿ ಹಸುವಿಗೆ ಬೇಕಾದ ಮೇವು ತರಲು ಕೂಡ ಸಾಧ್ಯವಾಗುತ್ತಿಲ್ಲ. ಅಂಗಡಿಯವನ ಬಳಿ ಸಾಲ ಕೇಳಿ ತರಬೇಕು ಎಂದಾದರೇ, ಮುಂದೆ ಸಾಲವನ್ನು ತೀರಿಸುವುದಾದರೇ ಹೇಗೆ? ಎಂಬ ಚಿಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಪಶು ಸಂಗೋಪಕರದ್ದಾಗಿದೆ.

ಇದರಿAದಾಗಿ ಹಸು, ಕರುವಿಗೆ ಸ್ಥಳೀಯವಾಗಿ ಸಿಗುವ ಹಲಸಿನ ಹಣ್ಣು, ಸೊಪ್ಪುಗಳನ್ನೆ ತಂದು ನೀಡಿ ದಿನನಿತ್ಯದ ಹೊಟ್ಟೆ ತುಂಬಿಸಲು ರೈತ ಮುಂದಾಗಿದ್ದಾನೆ.

ಇತ್ತ ಹೈನುಗಾರಿಕೆ ಕೇವಲ ಗ್ರಾಮೀಣ ಪ್ರದೇಶಕಷ್ಟೆ ಸೀಮಿತವಾಗಿಲ್ಲ. ಬದಲಾಗಿ ನಗರ ಪ್ರದೇಶದಲ್ಲಿಯೂ ಕೂಡಾ ಒಂದು, ಎರಡು ಸಿಂದಿ ಹಸುಗಳನ್ನು ಸಾಕಿಕೊಂಡು ಅದರಲ್ಲಿಯೇ ಜೀವನ ನಡೆಸುವವರು ಇದ್ದಾರೆ. ಅವರ ಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ. ಹಸುವಿನ ಆಹಾರಕ್ಕಾಗಿ ಎಲ್ಲಿಯೂ ಹೋಗಲಾರದೇ ಮನೆಯ ಅಂಗಳದಲ್ಲಿಯೇ ಹಸುಗಳನ್ನು ಕಟ್ಟಿ ಹಾಕಿ ಅಲ್ಲಿಯೇ ಉಪಚಾರ ಮಾಡುತ್ತಿದ್ದಾರೆ.

ಮಾರಾಟಕ್ಕೆ ದುಂಬಾಲು..!

ಹಸುವಿನ ಹಾಲನ್ನು ಕೊಂಡು ಕೊಳ್ಳುವವರೇ ಇಲ್ಲದಿರುವುದರಿಂದ ಅನ್ಯ ಮಾರ್ಗವಿಲ್ಲದೇ ಹಾಲನ್ನು ಬಾಟಲಿಗಳಲ್ಲಿ ತುಂಬಿ ನಗರ ಪ್ರದೇಶದಲ್ಲಿರುವ ಹಾಲಿನ ಕೇಂದ್ರ ಗಳಿಗೆ ತಂದು ಇದನ್ನು ಮಾರಿಕೊಡಿ ಎಂದು ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತ ಹಾಲನ್ನು ಮಾರಿದರಷ್ಟೆ ಆತನ ಕುಟುಂಬ ನಿರ್ವಹಣೆ ಆಗಬೇಕಾಗಿರುವುದರಿಂದ ಸಣ್ಣ ರೈತನಿಗೆ ಇದು ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲದಂತಾಗಿದೆ. ಈ ಹಾಲನ್ನು ಕೇಂದ್ರದವರು ಮಾರಿ ಕೊಟ್ಟರಷ್ಟೆ ಇತನ ಕುಟುಂಬ ನಿರ್ವಹಣೆ ಹಾಗೂ ಹಸುವಿನ ಹೊಟ್ಟೆ ತುಂಬಿಸ ಬಹುದಾಗಿದೆ.

- ಹೆಚ್.ಕೆ. ಜಗದೀಶ್