ಕಣಿವೆ, ಜೂ. ೨: ಬಹುಶಃ ಯಾವುದೇ ರಾಸಾಯನಿಕದ ಅಂಶವನ್ನು ಕಾಣದೇ ಸ್ವಾಭಾವಿಕವಾಗಿ ಬೆಳೆದು ಹಣ್ಣಾದಾಗ ಅದು ಸೂಸುವ ಪರಿಮಳದಿಂದ ಎಂತಹವರ ಬಾಯಲ್ಲೂ ನೀರೂರಿಸುವ ಏಕೈಕ ಹಣ್ಣು ಎಂದರೆ ಅದು ಹಲಸಿನ ಹಣ್ಣು ಎಂದರೆ ತಪ್ಪಾಗಲಾರದೇನೋ...! ಮಾರಕ ವೈರಸ್ ವ್ಯಾಪಿಸಿ ಇಡೀ ನಾಡು ಲಾಕ್ಡೌನ್ಗೆ ತುತ್ತಾದ ಪರಿಣಾಮ ಹೆದ್ದಾರಿಗಳು, ಹೆದ್ದಾರಿಗಳಲ್ಲಿ ಸಾಗುವ ಜನರು, ಪ್ರವಾಸಿಗರು ಹಾಗೂ ವಾಹನಗಳು ಲಾಕ್ ಆದ್ದರಿಂದ ಹೆದ್ದಾರಿಗಳಲ್ಲಿ ಕಾಣಸಿಗುತ್ತಿದ್ದ ಈ ಹಲಸಿನ ಹಣ್ಣು ಇದೀಗ ಬೇಡಿಕೆ ಇಲ್ಲದೇ ಮರದಲ್ಲಿಯೇ ಉಳಿದು ದಿನಗಳೆದಂತೆ ಉರುಳಿ ಉರುಳಿ ತನ್ನ ಭಾರವನ್ನು ಹೊತ್ತುನಿಂತ ಮರದ ಬುಡಕ್ಕೆ ಬೀಳುತ್ತಿವೆ.
ಹಳ್ಳಿಗಾಡು ಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆದ ಕೆಲವು ಕೃಷಿಕರು ಉಚಿತವಾಗಿ ನೆರೆ ಹೊರೆಯವರಿಗೆ ನೀಡುತ್ತಾರೆ. ನೆಂಟರಿಷ್ಟರು ಬಂದು ತೆಗೆದುಕೊಂಡು ಹೋಗಲು ಸಂಚಾರ ಸ್ಥಗಿತಗೊಂಡ ಕಾರಣ ಪೊಲೀಸರಿಗೆ ಹೆದರಿ ಕೆಲವರು ರಸ್ತೆಗಿಳಿಯುತ್ತಿಲ್ಲ. ಲಾಕ್ಡೌನ್ ಮುಕ್ತಾಯಗೊಂಡರೆ ಈಗಲೂ ಈ ಹಣ್ಣಿಗೆ ಬೇಡಿಕೆ ದೊರಕುತ್ತದೆ. ಅಂದರೆ ಕೆಲವು ವ್ಯಾಪಾರಿಗಳು ರೈತರಲ್ಲಿಗೆ ಬಂದು ಈ ಹಲಸಿನ ಹಣ್ಣು ಖರೀದಿಸಿ ಹೆದ್ದಾರಿ ಬದಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಹೆದ್ದಾರಿಯ ಆಯಕಟ್ಟಿನ ಜಾಗಗಳಲ್ಲಿ ಈ ಹಣ್ಣನ್ನು ಕತ್ತರಿಸಿ ಅಲಂಕೃತಗೊಳಿಸಿ ಹೆದ್ದಾರಿಯಲ್ಲಿ ಸಾಗುವವರನ್ನು ಆಕರ್ಷಿಸಿ ಇದರ ಬಿಡಿ ತೋಳೆಗಳನ್ನು ಹತ್ತು ರೂಗೆ ಇಂತಿಷ್ಟು ಎಂದು ಮಾರಾಟ ಮಾಡಿ ಒಳ್ಳೆಯ ಲಾಭ ಗಳಿಸುತ್ತಾರೆ.
ಆದರೆ ಜನ ಸಂಚಾರ ಎಂದಿನAತೆ ಹೆದ್ದಾರಿಯಲ್ಲಿ ಸಾಗಿದರೆ ಮಾತ್ರ ಈ ಹಣ್ಣು ವ್ಯಾಪಾರಿಗಳ ಕಣ್ಣು ಅರಳುತ್ತದೆ. ಹಾಗೆಯೇ ಈ ಹಣ್ಣಿನ ಮರಗಳನ್ನು ಬೆಳೆದ ಕೃಷಿಕರಿಗೂ ಒಂದಷ್ಟು ಹಣ ಸಿಗುತ್ತದೆ.
ಕುಶಾಲನಗರದ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದ ಹಲಸಿನ ಹಣ್ಣು ಕೃಷಿಕ ಸಿ.ಎಂ. ಸದಾಶಿವ ಎಂಬವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ, ‘ವರ್ಷ ವರ್ಷ ನಮ್ಮ ಹಲಸಿನ ಮರದ ಹಣ್ಣು ತಿನ್ನಲು ರುಚಿ ಅಂತಾ ತಿಳಿದ ಕೆಲವು ವ್ಯಾಪಾರಿಗಳು ಬಂದು ಕೊಂಡು ಹೋಗಿ ರಸ್ತೆ ಬದಿ ಮಾರಾಟ ಮಾಡಿ ಹಣಗಳಿಸುತ್ತಿದ್ದರು. ಆದರೆ ಈ ಬಾರಿ ಲಾಕ್ಡೌನ್ ಇರುವ ಕಾರಣ ಯಾರೂ ಕೂಡ ಖರೀದಿಗೆ ಬರುತ್ತಿಲ್ಲ. ಹಾಗಾಗಿ ನಾವು ಕೊಡೋರಿಗೆಲ್ಲಾ ಕೊಟ್ಟೊ. ಉಳಿದಂತೆ ಮರದಲ್ಲಿ ಉಳಿದಿದ್ದ ಹಣ್ಣುಗಳು ಭಾರವಾದಂತೆ ತೊಟ್ಟು ಕಳಚಿ ಕೆಳಗೆ ಬಿದ್ದು ಹಾನಿಯಾಗುತ್ತಿವೆ’ ಎನ್ನುತ್ತಾರೆ. ‘೨೦ ವರ್ಷಗಳ ಹಿಂದೆ ನಮ್ಮ ಗ್ರಾಮದವರೇ ಆದ ರಾಜಮಣಿ ಎಂಬವರ ಮರದಲ್ಲಿದ್ದ ಹಣ್ಣು ಒಂದಕ್ಕೆ ೨೫ ರೂಗಳನ್ನು ಕೊಟ್ಟು ಮನೆಗೆ ತಂದು ಹಣ್ಣು ತಿಂದು ಅದರ ಬೀಜಗಳನ್ನು ನೆಟ್ಟು ಬೆಳೆಸಿದ್ದೆ. ಇದೀಗ ಅವು ಮರಗಳಾಗಿ ಪ್ರತಿ ವರ್ಷ ಒಬ್ಬರು ಎತ್ತಲಾಗದಷ್ಟು ತೂಕ ಹಾಗೂ ಗಾತ್ರಕ್ಕೆ ಬೆಳೆಯುತ್ತಿವೆ’ ಎನ್ನುತ್ತಾರೆ.
ಹಲಸಿನ ಹಣ್ಣಿನ ಪ್ರಯೋಜನಗಳು
ಈ ಹಲಸಿನ ಹಣ್ಣಿನಲ್ಲಿ ಇರುವ ಅಧಿಕ ಪ್ರಮಾಣದ ಖನಿಜಗಳು ಮನುಷ್ಯನ ಆರೋಗ್ಯಕ್ಕೆ ಉಪಕಾರಿ. ದೇಹದಲ್ಲಿ ಹಾರ್ಮೋನುಗಳ ಉತ್ಪಾದನೆಗೆ ಥೈರಾಯ್ಡ್ ಗ್ರಂಥಿಗಳು ಅತಿ ಮುಖ್ಯ. ಈ ಥೈರಾಯ್ಡ್ ಗ್ರಂಥಿಗಳಿಗೆ ದೇಹದಲ್ಲಿ ಉತ್ಪತ್ತಿಯಾಗುವ ಸಕ್ಕರೆ ಅಂಶ ಮಾರಕ. ಆದರೆ ಈ ಹಣ್ಣು ಹೆಚ್ಚು ಸೇವಿಸಿದರೆ ಸಕ್ಕರೆ ಅಂಶವನ್ನು ನಿವಾರಿಸಿ ಖನಿಜಾಂಶಗಳನ್ನು ವೃದ್ಧಿಗೊಳಿಸುತ್ತದೆ. ಮುಪ್ಪು ಮುಂದೂಡುವ ಶಕ್ತಿ ಈ ಹಣ್ಣಿಗಿದೆ. ಹಾಗೆಯೇ ಪುರುಷರ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಿಟಮಿನ್ ‘ಎ' ಪೂರೈಸಿ ಕಣ್ಣುಗಳ ತೊಂದರೆ ನಿವಾರಿಸುತ್ತದೆ. ಜೊತೆಗೆ ಇರುಳುಗಣ್ಣಿನವರಿಗೆ ಹೆಚ್ಚು ಉಪಯೋಗ ನೀಡುತ್ತದೆ. ವಿಟಮಿನ್ ಬಿ-೬, ಹಾಗೂ ಮ್ಯಾಗ್ನಿಷಿಯಂ ಬಿ- ೧೨ ಪ್ರಮಾಣವನ್ನು ಹೆಚ್ಚಿಸಿ ನರಮಂಡಲದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಒಟ್ಟಾರೆ ವರ್ಷದ ಒಂದೇ ಸೀಸನ್ನಲ್ಲಿ ಸಿಗುವ ಈ ಹಣ್ಣನ್ನು ನಿಯಮಿತವಾಗಿ ತಿಂದು ಹೆಚ್ಚು ಆರೋಗ್ಯವನ್ನು ಹೊಂದಬಹುದಾಗಿದೆ. ಹಾಗೆಯೇ ಈ ಹಲಸಿನ ಹಣ್ಣಿನಿಂದ ಬಗೆ ಬಗೆಯ ರುಚಿಭರಿತ, ಸ್ವಾದ ಭರಿತ ಸಿಹಿ ಹಾಗೂ ಖಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಳ್ಳಿಗಳಲ್ಲಿ ಸಾಮೂಹಿಕ ಕಾರ್ಯಕ್ರಮಗಳು, ದೇವಾಲಯದ ಪೂಜಾ ಕಾರ್ಯಕ್ರಮಗಳು ಏರ್ಪಟ್ಟಾಗ ಈ ಹಲಸಿನ ಮರದ ಎಳೆಯ ಕಾಯಿಗಳನ್ನು ಊಟದ ಆಹಾರದ ಪ್ರಮುಖ ಖಾದ್ಯವಾಗಿ ಹೆಚ್ಚು ಬಳಸಲಾಗುತ್ತದೆ.
ಅದೇನೇ ಇರಲಿ, ಈ ಹಣ್ಣಿನ ಘಮ ಘಮ ಪರಿಮಳವನ್ನು ಹೀರುವ ಮೂಗು ಹಾಗೂ ಇದರ ಬಿಡಿಸಿಟ್ಟ ತೊಳೆಗಳನ್ನು ಕಣ್ಣುಗಳು ಕಂಡ ಬಳಿಕ ಎಂತಹವರ ಬಾಯಲ್ಲೂ ನೀರೂರುತ್ತಿತ್ತು. ಆದರೆ ಈಗ ಮನುಕುಲ ಎದುರಿಸುತ್ತಿರುವ ಈ ಕೆಟ್ಟ ಸಮಯದಲ್ಲಿ ಈ ಹಣ್ಣು ಬೆಳೆದ ಕೃಷಿಕರ ಕಣ್ಣುಗಳಲ್ಲಿ ನೀರು ಬರುತ್ತಿದೆ, ಏನು ಮಾಡೋದು...?!
ಕಾಲಾಯ ತಸ್ಮೈ ನಮಃ. - ಕೆ.ಎಸ್. ಮೂರ್ತಿ