ಗೋಣಿಕೊಪ್ಪಲು, ಜೂ. ೩: ಗೋಣಿಕೊಪ್ಪದ ಹೃದಯ ಭಾಗದಲ್ಲಿರುವ ಮಾನಸ ಮೆಡಿಕಲ್ ಸ್ಟೋರ್ಗೆ ಮುಂಜಾನೆ ೪ ಗಂಟೆಯ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮಳಿಗೆಯಲ್ಲಿದ್ದ ಕೋಟ್ಯಂತರ ಬೆಲೆ ಬಾಳುವ ಔಷಧಿಗಳು ಬೆಂಕಿಗೆ ಆಹುತಿಯಾಗಿವೆ.
ಔಷಧಿ ಮಳಿಗೆಗೆ ಪತ್ರಿಕೆ ಹಾಕಲು ತೆರಳುತ್ತಿದ್ದ ಮಂಜು ಎಂಬವರು ಮಳಿಗೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಲೀಕ ಪೂರ್ಣಚಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಬೆಳಗ್ಗಿನ ವಾಯುವಿಹಾರಕ್ಕೆ ತೆರಳುತ್ತಿದ್ದ ಗಣೇಶ್ ಹಾಗೂ ಸೂರ್ಯ ಅವರು ಘಟನೆ ಸಂಬAಧ ಅಗ್ನಿಶಾಮಕದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ತಿಳಿದ ಗೋಣಿಕೊಪ್ಪ ಚೆಸ್ಕಾಂ ಇಂಜಿನಿಯರ್ ಕೃಷ್ಣಕುಮಾರ್ ಬೆಳಿಗ್ಗೆ ೫.೧೫ ರ ವೇಳೆಗೆ ವಿದ್ಯುತ್ ಪೂರೈಕೆಯನ್ನು ತಡೆಹಿಡಿದಿದ್ದರು.
ಆರು ಗಂಟೆ ವೇಳೆಗೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ಕಳೆದ ೧೫ ವರ್ಷಗಳಿಂದ ನಗರದ ಹೃದಯ ಭಾಗದ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಮಾನಸ ಮೆಡಿಕಲ್ನಲ್ಲಿ ಎ.ಎನ್. ಪೂರ್ಣಚಂದ್ರ ಎಂಬುವರು ವ್ಯಾಪಾರ ನಡೆಸುತ್ತಿದ್ದರು.
ಮಳಿಗೆಯ ನಾಲ್ಕು ಕೊಠಡಿಗಳಲ್ಲಿ ಸಂಗ್ರಹ ಮಾಡಲಾಗಿದ್ದ ಬೆಲೆ ಬಾಳುವ ಅಪಾರ ಪ್ರಮಾಣದ ಔಷಧಿ, ಮಾತ್ರೆಗಳು ಸಂಪೂರ್ಣ ಅಗ್ನಿಯ ಕೆನ್ನಾಲಿಗೆಗೆ ತುತ್ತಾಗಿವೆ.