ಮಡಿಕೇರಿ, ಮೇ ೩೧: ಕೊರೊನಾದ ಈ ಸಂದಿಗ್ದ ಸಮಯದಲ್ಲಿ, ಅನೇಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತವರ ಪೈಕಿ ಸುಂಟಿಕೊಪ್ಪದ ಆಟೋ ಚಾಲಕರಾದ ಬಿ.ಕೆ. ಪ್ರಶಾಂತ್ ಕುಮಾರ್ (ಕೋಕ) ಅವರು ಕೂಡ ಒಬ್ಬರು. ಲಾಕ್‌ಡೌನ್‌ನ ಈ ಸಮಯದಲ್ಲಿ ಅನೇಕ ರೋಗಿಗಳ ರಕ್ಷಕರಾಗಿ ಅವರು ಹೊರಹೊಮ್ಮಿದ್ದಾರೆ. ಕಳೆದ ಏಪ್ರಿಲ್ ೩೦ ರಿಂದ ಇವರು ಅನೇಕರಿಗೆ ನೆರವಾಗಿದ್ದಾರಲ್ಲದೆ, ಈವರೆಗೆ ೫೫ ಕೊರೊನಾ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗಳಿಗೆ ತಮ್ಮ ಆಟೋ ರಿಕ್ಷಾದಲ್ಲಿ ತಲುಪಿಸಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ ಪ್ರಶಾಂತ್ ಅವರ ತಾಯಿ ಪಾರ್ವತಿಯವರಿಗೆ ಕೊರೊನಾ ಸೋಂಕು ತಗಲಿತು; ಅವರು ಗಂಭೀರ ಸ್ಥಿತಿಯಲ್ಲಿದ್ದರು. ತಾಯಿಯನ್ನು ತನ್ನ ಆಟೋರಿಕ್ಷಾದಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆದೊಯ್ದರು. ತಾಯಿಯ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿAದ, ವೆಂಟಿಲೇಟರ್ ಸಹಾಯದ ಮೂಲಕ ಚಿಕಿತ್ಸೆ ನೀಡಲಾಗಿ, ತಾಯಿ ಕೆಲದಿನಗಳಲ್ಲಿ ಗುಣಮುಖರಾಗಿ ಮನೆಗೆ ಹಿಂದಿರುಗಿದರು.

“ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಮಯದಲ್ಲಿ, ನಾನು ಅನೇಕ ಕೊರೊನಾ ಸೋಂಕಿತರು ಯಾವದೇ ಸಾರಿಗೆ ಸೌಲಭ್ಯವಿಲ್ಲದ ಕಾರಣ ಪರದಾಡುತ್ತಿರುವದನ್ನು ಪ್ರತ್ಯಕ್ಷವಾಗಿ ಗಮನಿಸಿದ್ದೆ. ಇನ್ನು, ನನ್ನ ಮನೆಯ ಪಕ್ಕದಲ್ಲಿರುವ ಶಾಲಾ ಶಿಕ್ಷಕರ ಪರಿವಾರದವರೆಲ್ಲರಿಗೂ ಕೊರೊನಾ ಸೋಂಕು ತಗಲಿತು. ಈ ಸಮಯದಲ್ಲಿ ಯಾರೂ ಅವರನ್ನು ಮಡಿಕೇರಿಯ ಆಸ್ಪತ್ರೆಗೆ ಕರೆದೊಯ್ಯಲು ಮುಂದೆ ಬರಲಿಲ್ಲ. ಧೈರ್ಯಮಾಡಿ ನಾನು ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ,” ಎಂದು ‘ಶಕ್ತಿ’ಗೆ ಪ್ರಶಾಂತ್ ತಿಳಿಸಿದರು.

ಹೀಗೆ ಅವರ ಸೇವೆ ಪ್ರಾರಂಭವಾಗಿ, ಈವರೆಗೆ ೫೫ ಸೋಂಕಿತರಿಗೆ ಅವರು ಉಚಿತ ಸೇವೆ ನೀಡಿದ್ದು, ಸುಂಟಿಕೊಪ್ಪ ಪಂಚಾಯಿತಿ ಸದಸ್ಯರಾದ ಸುನಿಲ್ ಹಾಗೂ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೇಣುಗೋಪಾಲ್ ಅವರ ಸಹಾಯದಿಂದ ಲಾಕ್‌ಡೌನ್ ಸಮಯದಲ್ಲಿ ಆಟೋ ಚಾಲಿಸಲು ಪಾಸ್ ಪಡೆದುಕೊಂಡಿದ್ದಾರೆ. “ಒಮ್ಮೆ ಮಡಿಕೇರಿಯ ಮಾರುಕಟ್ಟೆ ರಸ್ತೆ ಬದಿಯಲ್ಲಿ ಸುಮಾರು ೧೧ ಗಂಟೆ ರಾತ್ರಿ ಸಮಯದಲ್ಲಿ ಒಬ್ಬ ಅನಾಥ ವ್ಯಕ್ತಿ ಅಸ್ವಸ್ಥನಂತೆ ಮಲಗಿರುವುದನ್ನು ಗಮನಿಸಿದೆ. ಅವನ ಹೆಸರು ಹನೀಫ್. ಅವನನ್ನು ನಾನು ಕೋವಿಡ್ ಆಸ್ಪತ್ರೆಗೆ ತಲುಪಿಸಿದಾಗ, ಅವನಿಗೆ ಕೊರೊನಾ ಸೋಂಕು ತಗಲಿದ್ದು ದೃಢಪಟ್ಟಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಿದೆ ನಾದರೂ, ಅವನು ಬದುಕಲಿಲ್ಲ,” ಎಂದು ದುಃಖಿಸುತ್ತಾರೆ ಪ್ರಶಾಂತ್. ತಾನು ಕರೆದೊಯ್ದ ೫೫ ಸೋಂಕಿತರಲ್ಲಿ ಹನೀಫ್ ಹಾಗೂ ಇನ್ನೊಬ್ಬ ಸೋಂಕಿತ ಸುಬ್ಬು ಬದುಕಿ ಹಿಂತಿರುಗಲಿಲ್ಲ ಎಂದು ಅವರು ವಿಷಾದಿಸುತ್ತಾರೆ.

ಕೇವಲ ಕೊರೊನಾ ಸೋಂಕಿತರಲ್ಲದೆ, ಒಬ್ಬ ಗರ್ಭಿಣಿ ಮಹಿಳೆಗೂ ಪ್ರಶಾಂತ್ ನೆರವಾಗಿದ್ದಾರೆ. “ಹೆಚ್.ಐ.ವಿ ಸೋಂಕಿತ ಗರ್ಭಿಣಿ ಮಹಿಳೆಯೊಬ್ಬರು ಸುಂಟಿಕೊಪ್ಪ ಆಸ್ಪತ್ರೆಯಲ್ಲಿ ದಾಖಲಾತಿಗೆ ತೆರಳಿದಾಗ, ಆಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆಗೆ ತೆರಳುವಂತೆ ಹೇಳಿದರಂತೆ. ಇನ್ನೇನು ಮಗುವಿನ ಜನನ ಆಗಬೇಕೆನ್ನುವಷ್ಟರಲ್ಲಿ ಕೂಡಲೇ ಜಿಲ್ಲಾಸ್ಪತ್ರೆಗೆ ತೆರಳಬೇಕಿದ್ದರಿಂದ ನಾನು ಆ ಮಹಿಳೆ ಹಾಗೂ ಅವಳ ಗಂಡನನ್ನು ಆಸ್ಪತ್ರೆಗೆ ಸಕಾಲದಲ್ಲಿ ತಲುಪಿಸಿದೆ,” ಎಂದು ಪ್ರಶಾಂತ್ ನೆನಪಿಸಿಕೊಳ್ಳುತ್ತಾರೆ. ಅವರ ಈ ಸೇವಾ ಕಾರ್ಯಕ್ಕೆ ಪಂಚಾಯಿತಿ ಸದಸ್ಯ ಸುನಿಲ್, ಸಮಾಜ ಸೇವಕ ರಾಕೇಶ್ ಹಾಗೂ ಸುಂಟಿಕೊಪ್ಪ ರಕ್ಷಣಾ ವೇದಿಕೆಯವರು ಕೈಜೋಡಿಸಿ ಅನೇಕ ದಾನಿಗಳ ನೆರವಿನ ಮೂಲಕ ಆಟೋರಿಕ್ಷಾಕ್ಕೆ ಡೀಸೆಲ್ ಖರ್ಚು ಪಾವತಿಯ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಸುಂಟಿಕೊಪ್ಪ ಆಸ್ಪತ್ರೆಯ ವೈದ್ಯರಾದ ಡಾ. ಜೀವನ್ ಅವರ ಸಹಾಯದಿಂದ ಪಿ.ಪಿ.ಇ ಕಿಟ್‌ನ ಸೌಲಭ್ಯವನ್ನು ಇವರಿಗೆ ಒದಗಿಸಲಾಗಿದೆೆ. “ಆರಂಭದ ದಿನಗಳಲ್ಲಿ ನನ್ನ ಕುಟುಂಬ ಪರಿವಾರದವರು ನನ್ನ ಕಾರ್ಯದ ಬಗ್ಗೆ ಭಯಭೀತರಾಗಿದ್ದರಾದರೂ ಬಳಿಕ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದು ಇದೀಗ ಹೆಮ್ಮೆ ಪಡುತ್ತಾರೆ. ಕಿಟ್ ಧರಿಸಿದರೂ ಮನೆಗೆ ಹಿಂತಿರುಗಿದ ತಕ್ಷಣ ಸ್ನಾನ ಮಾಡಿ ಮನೆಯೊಳಗೆ ತೆರಳುವೆ,” ಎಂದು ಪ್ರಶಾಂತ್ ನುಡಿದರು.

-ಪ್ರಜ್ಞಾ.ಜಿ.ಆರ್.