ಶಾಸಕ ಕೆ.ಜಿ. ಬೋಪಯ್ಯ

ಪೆರಾಜೆ, ಜೂ. ೧: ಸರ್ಕಾರವು ಕೊರೊನಾ ಸೋಂಕು ತಡೆಗಟ್ಟಲು ಜಾರಿಗೆ ತಂದಿರುವ ಕಠಿಣ ಕ್ರಮಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸದ ಪರಿಣಾಮ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಪೆರಾಜೆ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿಯ ಕೊರೊನಾ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪೆರಾಜೆ ಗ್ರಾಮವು ಕೊಡಗಿನ ಗಡಿ ಗ್ರಾಮವಾಗಿದ್ದು, ಜಿಲ್ಲೆಯಲ್ಲಿ ವಾರದಲ್ಲಿ ಕೇವಲ ೩ ದಿನ ಬೆಳಿಗ್ಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿದ್ದರೆ, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದ ೭ ದಿನವೂ ಬೆಳಿಗ್ಗೆ ಅಂಗಡಿಗಳು ತೆರೆದಿರುತ್ತವೆ. ಗ್ರಾಮದಿಂದ ಪ್ರತಿ ದಿನ ಪೇಟೆಗಳಿಗೆ ಅನಗತ್ಯವಾಗಿ ಸಂಚರಿಸುವುದನ್ನು ಬಿಟ್ಟು ಕೊಡಗಿನ ನಿಯಮದಲ್ಲೆ ವ್ಯಾಪಾರ ವಹಿವಾಟುಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಸುಳ್ಯ ನಗರ ಸೇರಿದಂತೆ ಗ್ರಾಮದ ಹೊರಗಿನಿಂದ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡು ಬರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕೊರೊನಾ ಸೋಂಕಿತರು ಹಾಗೂ ಪರೀಕ್ಷೆಗೊಳಪಟ್ಟವರು ವರದಿ ಬರುವವರೆಗೂ ಮನೆಯಲ್ಲಿಯೇ ಇರಬೇಕಾಗುತ್ತದೆ, ತಪ್ಪಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಕೋವಿಡ್ ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳು ಇನ್ನು ಮುಂದೆ ಮನೆಯಲ್ಲಿ ಐಸೋಲೇಷನ್‌ಗೆ ಒಳಗಾಗದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ತೆರಳುವಂತೆ ಕ್ರಮಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬೋಪಯ್ಯ ಸೂಚನೆ ನೀಡಿದರು. ಅಲ್ಲದೆ ಗ್ರಾಮದಲ್ಲಿ ಡೆಂಗ್ಯೂ ಜ್ವರವು ಅಧಿಕವಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭ ಆಡಳಿತ ಅಧಿಕಾರಿ ಶಾಬಾನಾ ಎವರ್ ಶೇಕ್, ಮಡಿಕೇರಿ ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಶೇಖರ್, ಮಡಿಕೇರಿ ತಹಶೀಲ್ದಾರ್ ಮಹೇಶ್ ಸೇರಿದಂತೆ ಅಧಿಕಾರಿಗಳು, ಜನ ಪ್ರತಿನಿಧಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.