ಕುಶಾಲನಗರ, ಜೂ. ೧: ಕೊಡಗು ಜಿಲ್ಲೆ ಕುಶಾಲನಗರ ಐತಿಹಾಸಿಕ ತಾವರೆಕೆರೆ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ಕೆರೆ ಮತ್ತು ಬಫರ್ ವಲಯದ ಸರ್ವೆ ಕಾರ್ಯ ನಡೆಸುವಂತೆ ನೀಡಿದ್ದ ಆದೇಶ ಪಾಲನೆ ತಾ. ೨೩ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡುವಂತೆ ಹೈಕೋರ್ಟ್ ಕೊಡಗು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ವಕೀಲರಾದ ಎನ್ ಪಿ ಅಮೃತೇಶ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ. ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿದೆ. ಕೆರೆ ಒತ್ತುವರಿ ಬಗ್ಗೆ ಪರಿಶೀಲಿಸಲು ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಈ ಹಿಂದೆ ಹೈಕೋರ್ಟ್ ಸೂಚನೆ ನೀಡಿತ್ತು. ಕ್ರಮ ಕೈಗೊಳ್ಳದಿರುವುದರ ಬಗ್ಗೆ ಅರ್ಜಿದಾರರಾದ ಅಮೃತೇಶ್ ದೂರಿದ್ದು, ಈ ಹಿನ್ನೆಲೆಯಲ್ಲಿ ತಾ. ೨೩ ರಂದು ಜಿಲ್ಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ ಪೀಠ ವಿಚಾರಣೆ ಮುಂದೂಡಿದೆ.