ಕಣಿವೆ, ಜೂ. ೧: ಕಳೆದ ವಾರ ಸುರಿದ ಉತ್ತಮವಾದ ಹದಮಳೆಗೆ ಭೂಮಿಯನ್ನು ಉಳುಮೆ ಮಾಡಿ ಜೋಳ ಬಿತ್ತನೆ ಮಾಡಿದ ಬಹುತೇಕ ರೈತರ ಜೋಳ ಬಿತ್ತನೆಗೆ ಈಗ ಮಳೆ ಅತೀ ಅವಶ್ಯವಾಗಿ ಬೇಕಿದೆ. ಆದರೆ ಕಳೆದ ನಾಲ್ಕು - ಐದು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ ಬಾರದ ಕಾರಣ ಜೋಳ ಕೃಷಿಕರು ಮಳೆರಾಯನಿಗಾಗಿ ಕಾಯುತ್ತಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ. ಬಳಿಕ ಕೊಡಗಿಗೂ ಕಾಲಿಡಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದರೂ ಕೂಡ, ಇನ್ನೆರಡು ದಿನಗಳಲ್ಲಿ ಜೋಳ ಬಿತ್ತಿದ ಹೊಲ ಗದ್ದೆಗಳಿಗೆ ಮಳೆ ಬಾರದಿದ್ದಲ್ಲಿ ಬಿತ್ತಿದ ಜೋಳವೆಲ್ಲಾ ನಿಷ್ಪçಯೋಜಕವಾಗಲಿದೆ. ಹದಮಳೆಗೆ ಭೂಮಿಯನ್ನು ಉಳುಮೆ ಮಾಡಿ ಅಣಿಗೊಳಿಸಿ ಬಿತ್ತನೆ ಮಾಡಿದ ೨೪ ಗಂಟೆ ಅಥವಾ ೪೮ ಗಂಟೆಗಳಲ್ಲಿ ಬೀಜ ಬಿತ್ತಿದ ಭೂಮಿಗೆ ಮಳೆ ಬಂದರೆ ಆ ಬೀಜ ಮಣ್ಣಿನೊಳಗೆ ಮೊಳಕೆಯೊಡೆಯುತ್ತದೆ. ಬಳಿಕ ಮಣ್ಣಿನ ಮೇಲ್ಪದರವನ್ನು ಸೀಳಿ ಹೊರಬರುತ್ತದೆ. ಆದರೆ, ಮಳೆಯೇ ಬಾರದಿರುವ ಕಾರಣ ಬಿತ್ತಿದ ಬೀಜ ಮೊಳಕೆ ಯೊಡೆಯಲು ಹರಸಾಹಸಪಟ್ಟು ಇದ್ದಲ್ಲಿಯೇ ಕಾದ ಮಣ್ಣಿನಲ್ಲಿ ಮೊಳಕೆಯೊಡೆವ ಶಕ್ತಿ ಕಳೆದುಕೊಳ್ಳುತ್ತದೆ ಎನ್ನುತ್ತಾರೆ ಕೃಷಿಕರು.

ಮುಂಗಾರು ಮಳೆಯನ್ನು ನಂಬಿ ಅರೆ ನೀರಾವರಿ ಪ್ರದೇಶಗಳ ಸಾಕಷ್ಟು ರೈತರು, ಕೊರೊನಾದಂಹ ಸಂಕಷ್ಟದ ಸಮಯದಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಸಕಾಲದಲ್ಲಿ ಮಳೆ ಬಂದರೆ ಬಿತ್ತಿದ ಜೋಳ ಉಳಿಯುತ್ತದೆ. ಉಳಿದು ಬೆಳೆಯುತ್ತದೆ.

-ಕೆ.ಎಸ್. ಮೂರ್ತಿ