ಹೆಚ್.ಜೆ. ರಾಕೇಶ್ ಮಡಿಕೇರಿ, ಜೂ. ೧: ಕೊರೊನಾ ೨ನೇ ಅಲೆ ದೇಶವ್ಯಾಪಿ ರಣಭೀಕರತೆ ಸೃಷ್ಟಿಸಿ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಕೊರೊನಾ ಜೀವದ ಜೊತೆ ಆಟವಾಡಿದರೆ, ಲಾಕ್ಡೌನ್ ಜೀವನದ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರ ನಡುವೆ ಶ್ರಮಿಕ ವರ್ಗ ಅಡಕತ್ತರಿಗೆ ಸಿಲುಕಿ ನರಳಾಡುತ್ತಿದೆ.ದಿನಗೂಲಿ ಕೆಲಸಗಾರರು, ಅಸಂಘಟಿತ ಕಾರ್ಮಿಕರು ಲಾಕ್ಡೌನ್, ಕೊರೊನಾ ಪರಿಸ್ಥಿತಿಯಿಂದ ಕಂಗೆಟ್ಟಿದ್ದಾರೆ. ದಿನಕಳೆದಂತೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಇದನ್ನು ಅರಿತ ಸರಕಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತೆ ಕೋವಿಡ್ ಪ್ಯಾಕೇಜ್ ಘೋಷಿಸಿದ್ದು, ಕೊಡಗು ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು ಸೇರಿ ಒಟ್ಟು ೯೮೪೩ ಅರ್ಹರು ಪರಿಹಾರ ಧನ ಪಡೆಯಲು ಫಲಾನುಭವಿಗಳಾಗಿದ್ದಾರೆ. ಕಾರ್ಮಿಕ ಮಂಡಳಿ ವ್ಯಾಪ್ತಿಯಲ್ಲಿ ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರು ಒಳಪಟ್ಟಿಲ್ಲ.ನೋಂದಾಯಿತ ಕಾರ್ಮಿಕರಿಗೆ ಸಹಾಯಧನ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ನೋಂದಣಿಗೊAಡ ಕಾರ್ಮಿಕರಿಗೆ ಮಾತ್ರ ಸರಕಾರದ ಸಹಾಯಧನ ಲಭಿಸಲಿದೆ. ಕೊಡಗು ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಒಟ್ಟು ೬೮೯೨, ಅಸಂಘಟಿತ ಕಾರ್ಮಿಕರು ೨೯೫೧ ಇದ್ದು, ಇವರಿಗೆ ಸರಕಾರದ ಸಹಾಯಧನ ದೊರೆಯಲಿದೆ.ಅಸಂಘಟಿತ ವಲಯದಲ್ಲಿ ಹಮಾಲರು, ಟೈಲರ್, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕ್ಯಾನಿಕ್, ಅಗಸ್ತರು, ಅಕ್ಕಸಾಲಿಗರು, ಕಮ್ಮಾರರು, ಸವಿತಾ ಸಮಾಜ, ಕುಂಬಾರರು, ಭಟ್ಟಿ ಕಾರ್ಮಿಕರನ್ನು (ಮಂಡಕ್ಕಿ ತಯಾರಕರು) ಗುರುತಿಸಲಾಗಿದೆ. ಕಟ್ಟಡ ಕಾರ್ಮಿಕರನ್ನು ಪ್ರತ್ಯೇಕವಾಗಿರಿಸಲಾಗಿದೆ.ಅಸಂಘಟಿತ ಕಾರ್ಮಿಕರಿಗೆ ರೂ ೨ ಸಾವಿರ, ಕಟ್ಟಡ ಕಾರ್ಮಿಕರಿಗೆ ರೂ ೩ ಸಾವಿರನ್ನು ಒಂದು ಬಾರಿ ನೀಡಲು ಈಗಾಗಲೇ ಸರಕಾರ ಕೋವಿಡ್ ಪ್ಯಾಕೇಜ್ನಡಿ ಘೋಷಿಸಿದ್ದು, ಅರ್ಜಿದಾರರ ವಯೋಮಿತಿಯನ್ನು ೧೮ ರಿಂದ ೬೫ವರ್ಷದೊಳಗೆ ಸೀಮಿತಗೊಳಿಸಿದೆ.ಆನ್ಲೈನ್ ಮೂಲಕ ಅರ್ಜಿ ಅಸಂಘಟಿತ ಕಾರ್ಮಿಕರು ಕೋವಿಡ್ ಪ್ಯಾಕೇಜ್ನಡಿ ಸಹಾಯಧನ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಸಹಾಯಧನ ಪಡೆಯಲು ಕಾರ್ಮಿಕರು ಹೊಸ ಅರ್ಜಿ ಸಲ್ಲಿಸುವ, ಕಚೇರಿಗೆ ಭೇಟಿ ನೀಡುವ ಅಥವಾ ಮಧ್ಯವರ್ತಿಗಳ ಸಂಪರ್ಕಿ ಸುವ ಅವಶ್ಯಕತೆ ಇಲ್ಲ. ಜೊತೆಗೆ ನೋಂದಾಯಿತ ಕಟ್ಟಡ ಕಾರ್ಮಿಕರು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿಲ್ಲ.
(ಮೊದಲ ಪುಟದಿಂದ) ಮಂಡಳಿಯಲ್ಲಿ ನೋಂದಣಿ ಯಾಗಿರುವ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಅವರವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ. (ನೇರ ನಗದು ವರ್ಗಾವಣೆ) ಮುಖಾಂತರ ಸಹಾಯಧನವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಲಾಗುವುದು.
ಮಂಡಳಿಯಲ್ಲಿ ನೋಂದಯಿ ಸಿರುವ ಕಾರ್ಮಿಕರು ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಅಥವಾ ಬ್ಯಾಂಕ್ ಖಾತೆ ನಿಷ್ಕಿçಯಗೊಂಡಿದ್ದಲ್ಲಿ ಈ ಕೂಡಲೇ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿ ಅನಿಲ್ ಬಗಟಿ ‘ಶಕ್ತಿ’ಗೆ ತಿಳಿಸಿದ್ದಾರೆ.
ಅಸಂಘಟಿತ ವರ್ಗದ ಕಾರ್ಮಿಕರು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಣಿಯಾದ ಬಿ.ಪಿ.ಎಲ್. ಕುಟುಂಬದ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಇತರೆ ಸದಸ್ಯರು ನೆರವು ಕೋರಿ ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತಿಲ್ಲ. ನೆರವು ಪಡೆಯಲು ಅರ್ಹರಾದ ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ.
ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಬಿ.ಪಿ.ಎಲ್.ಸಂಖ್ಯೆ, ಭಾವಚಿತ್ರ, ಬ್ಯಾಂಕ್ ಖಾತೆ ವಿವರ, ಉದ್ಯೋಗ ಪ್ರಮಾಣ ಪತ್ರ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ.