ಸೋಮವಾರಪೇಟೆ, ಮೇ ೩೧: ತಾಲೂಕಿನ ಸಿದ್ಧಲಿಂಗಪುರ-ಅರಸಿನ ಕುಪ್ಪೆ ಗ್ರಾಮದ ಶ್ರೀಮಂಜುನಾಥಸ್ವಾಮಿ ಹಾಗೂ ನವನಾಗನಾಥ ದೇವಾಲಯದ ವತಿಯಿಂದ ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಕೆಲಸ ಮಾಡಲು ಸಾಧ್ಯವಾಗದ ಕೂಲಿ ಕಾರ್ಮಿಕರು ಹಾಗೂ ಕಡುಬಡವರಿಗೆ ಉಚಿತವಾಗಿ ಆಹಾರ ಕಿಟ್‌ಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು.

ಕ್ಷೇತ್ರದ ಗುರುಗಳಾದ ರಾಜೇಶ್‌ನಾಥ್‌ಜಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ಕೋವಿಡ್-೧೯ ಎರಡನೆ ಅಲೆಯಿಂದಾಗಿ ಬಹಳಷ್ಟು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಲಾಕ್‌ಡೌನ್ ಇರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತಲಿನ ಕಡುಬಡವರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ೩೫ ಫಲಾನುಭವಿ ಗಳಿಗೆ ಕ್ಷೇತ್ರದ ವತಿಯಿಂದ ವಿತರಿಸ ಲಾಗಿದೆ. ಮುಂದೆಯೂ ಕ್ಷೇತ್ರದಿಂದ ಹಂತ ಹಂತವಾಗಿ ಆಹಾರ ಕಿಟ್ ಗಳನ್ನು ಒದಗಿಸಲು ದೇವಾಲಯದ ಭಕ್ತ ಸಮೂಹ ಕೈ ಜೋಡಿಸಲು ಮುಂದಾಗಿದೆ ಎಂದರು.

ಇದರೊAದಿಗೆ ಹೆಬ್ಬಾಲೆ, ಕುಶಾಲನಗರ, ಕೂಡಿಗೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಲಾಕ್‌ಡೌನ್‌ನಿಂದ ತೊಂದರೆಗೊಳ ಗಾದ ಕುಟುಂಬಗಳಿಗೆ ಅಗತ್ಯವಿರುವ ವೈದ್ಯಕೀಯ ಸೇವೆ, ಆಸ್ಪತ್ರೆಗಳಿಗೆ ತೆರಳಲು ತೊಂದರೆಗೊಳಗಾದವರಿಗೆ, ಮಡಿಕೇರಿ, ತಾಲೂಕು ಕೇಂದ್ರಗಳಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದೆ ಇರುವ ಕುಟುಂಬಗಳಿಗೆ ವಾಹನಗಳ ನೆರವು ಒದಗಿಸಲು ಸಹಾಯವಾಣಿ ಮತ್ತು ನೆರವು ಕೇಂದ್ರವನ್ನು ಕ್ಷೇತ್ರದ ವತಿಯಿಂದ ಆರಂಭಿಸಲಾಗಿದೆ. ಉತ್ತಮ ಕಾರ್ಯಕ್ಕೆ ದಾನಿಗಳು ಕೈಜೋಡಿಸಿದ್ದಾರೆ ಎಂದು ಹೇಳಿದರು.

ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಕ್ಷೇತ್ರದ ವತಿಯಿಂದ ಕೋವಿಡ್ ಹೆಲ್ಪ್ಲೈನ್ ಸಮಿತಿ ರಚಿಸಲಾಗಿದೆ. ಸಮಿತಿಗೆ ಈಗಾಗಲೇ ಸ್ವಯಂಸೇವಕರನ್ನು ನೇಮಕಮಾಡ ಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಗುರುಗಳ ಮಾರ್ಗದರ್ಶನದಲ್ಲಿ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು. ಎಸ್‌ಎಲ್‌ಎನ್ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥನ್, ಅನ್ನಪೂರ್ಣ ಕಾಫಿ ಕ್ಯೂರಿಂಗ್ ಮಾಲೀಕ ಪ್ರೇಮನಾಥನ್, ಮುಳ್ಳುಸೋಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ತಾರನಾಥ್, ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕ ಮುರಳೀಧರ್, ತೊರೆನೂರು ಗ್ರಾಪಂ ಸದಸ್ಯ ಮತ್ತು ಕ್ಷೇತ್ರದ ಕಾರ್ಯದರ್ಶಿ ಪ್ರಕಾಶ್, ಸಮಿತಿ ಸದಸ್ಯರಾದ ಅರ್ಜುನ್, ಪದಾಧಿಕಾರಿಗಳಾದ ರಮೇಶ್, ಪ್ರದೀಪ್, ಧನು ಮತ್ತು ದೇವಾಲಯ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.