ಸೋಮವಾರಪೇಟೆ,ಜೂ.೧: ಅನೇಕ ದಶಕಗಳ ನಂತರ ನಿರ್ಮಾಣವಾದ ಹರಗ ಮುಖ್ಯ ರಸ್ತೆಯ ಸೇತುವೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾದ ಹಿನ್ನೆಲೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ ಸೇತುವೆ ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿ, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಲೋಕೋಪಯೋಗಿ ಇಲಾಖೆ ಮೂಲಕ ರೂ. ೮೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಅವೈಜ್ಞಾನಿಕವಾಗಿರುವ ಹಿನ್ನೆಲೆ ಈಗಾಗಲೇ ಬಿದ್ದ ಮಳೆಗೆ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ಅಭಿಯಂತರರನ್ನು ಪ್ರಶ್ನಿಸಿದರೆ ಯಾವುದೋ ವಾಹನ ಗುದ್ದಿರಬೇಕು ಎಂದು ಉಡಾಫೆಯ ಮಾತನ್ನಾಡುತ್ತಿದ್ದಾರೆ. ಇದರೊಂದಿಗೆ ಸೇತುವೆಯ ಬದಿಯಲ್ಲಿ ಹಾಕಿದ್ದ ಮಣ್ಣು ಕುಸಿದು ಹೊಳೆಯ ಪಾಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದರೂ ಸಂಚಾರಕ್ಕೆ ತೊಡಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.
ಈ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಶಾಸಕ ರಂಜನ್, ತಕ್ಷಣ ಸೇತುವೆ ಕಾಮಗಾರಿಯನ್ನು ಸಮರ್ಪಕಗೊಳಿಸಬೇಕು. ಮಣ್ಣುಕುಸಿಯದಂತೆ ಕ್ರಮ ವಹಿಸಬೇಕು. ಇದರೊಂದಿಗೆ ಸಂಬAಧಿಸಿದ ಅಭಿಯಂತರ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು. ಈ ಸಂದರ್ಭ ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜೀ ಸದಸ್ಯ ಬಿ.ಎ. ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.