ಮಡಿಕೇರಿ, ಜೂ.೧ : ಕೋವಿಡ್ ಸಂದರ್ಭದಲ್ಲೂ ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ವರ್ತಕ ಸಮುದಾಯದವರನ್ನು ಆದ್ಯತಾ ವಲಯ ಗುಂಪಿಗೆ ಸೇರಿಸಿ ಅವರುಗಳಿಗೆ ಲಸಿಕೆ ನೀಡಬೇಕೆಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಈ ಕುರಿತು ಹೇಳಿದ ನೀಡಿರುವ ಅಧ್ಯಕ್ಷ ಎಂ. ಧನಂಜಯ ಕೋವಿಡ್-೧೯ರ ವಿರುದ್ಧ ೨ನೇ ಅಲೆಯಲ್ಲಿ ಅಪಾರ ಪ್ರಮಾಣದ ಜೀವ ಹಾನಿಯಾದ ನಂತರ ಸರ್ಕಾರ ಮತ್ತು ಜಿಲ್ಲಾಡಳಿತ ಆದ್ಯತೆ ಗುಂಪುಗಳನ್ನು ಮಾಡಿ ಲಸಿಕೆ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ.
ಆದರೆ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಕೋವಿಡ್ ನಿಯಮಾವಳಿ ಪ್ರಕಾರ ಜಿಲ್ಲೆಯಾದ್ಯಂತ ವರ್ತಕ ಸಮುದಾಯ ಸೋಮವಾರ, ಬುಧವಾರ ಮತ್ತು ಶುಕ್ರವಾರ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿದೆ. ವರ್ತಕ ಸಮುದಾಯ ಈ ಲಸಿಕೆ ಅಭಿಯಾನದ ಆದ್ಯತೆ ಗುಂಪಿಗೆ ಸೇರದಿರುವುದು ಆಶ್ಚರ್ಯಕರವಾಗಿದೆ. ವರ್ತಕ ಸಮುದಾಯ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮತ್ತು ಇತರ ಜನಸಂದಣಿಗೆ ಒಳಗಾಗುವವರಲ್ಲಿ ಪ್ರಮುಖರಾಗುತ್ತಾರೆ. ಇದೇ ಕಾರಣದಿಂದ ನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ನಗರಸಭೆ ಜಂಟಿಯಾಗಿ ಕಾರ್ಯನಿರ್ವಹಿಸಿ ವರ್ತಕ ಬಾಂಧವರೆಲ್ಲರೂ ಕೋವಿಡ್ ಟೆಸ್ಟ್ ನೀಡುವಂತೆ ಅಭಿಯಾನ ನಡೆಸಿ ಎಲ್ಲರೂ ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಿದ್ದೇವು. ಕಾರ್ಯಕ್ರಮ ವರ್ತಕರ ಜವಾಬ್ದಾರಿಯುತ ಪಾಲ್ಗೊಳ್ಳುವಿಕೆಯಿಂದ ಸಾಂಗವಾಗಿ ನೆರವೇರಿರುತ್ತದೆ. ಈಗಾಗಲೇ ಪ್ರಾಯದ ಆಧಾರದಲ್ಲಿ ಲಸಿಕೆ ಪಡೆದ ೪೫ ವರ್ಷ ಪ್ರಾಯದ ನಂತರದವರನ್ನು ಹೊರತುಪಡಿಸಿ ಎಲ್ಲಾ ಪ್ರಾಯದ ಅಂಗಡಿ ಮಾಲೀಕರುಗಳಿಗೆ ಆದ್ಯತೆ ಮೇರೆ ಲಸಿಕೆ ನೀಡುವ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಎಂ. ಧನಂಜಯ ಆಗ್ರಹಿಸಿದ್ದಾರೆ.