*ವೀರಾಜಪೇಟೆ, ಜೂ. ೧: ಪ್ರಸಕ್ತ ಜಾರಿಯಲ್ಲಿರುವ ಕೋವಿಡ್-೧೯ ಲಾಕ್‌ಡೌನ್ ಬಗ್ಗೆ ವೀರಾಜಪೇಟೆ ನಾಗರಿಕ ಸಮಿತಿ ಕೆಲವೊಂದು ಸಲಹೆಗಳನ್ನು ನೀಡಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಮುಖ ಡಾ. ದುರ್ಗಾ ಪ್ರಸಾದ್, ಹೊರ ರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ಬರುವವರರನ್ನು ತಡೆಯಬೇಕು. ಅನಿವಾರ್ಯವಾಗಿ ಬರಲೇಬೇಕಾದವರು ಒಂದು ದಿನಕ್ಕೆ ಬಂದು ಹೋಗುವವರು ಕೋವಿಡ್‌ಗೆ ಸಂಬAಧಪಟ್ಟ ವರದಿಯನ್ನು ಸಲ್ಲಿಸಬೇಕು.

ಅಧಿಕ ದಿನ ತಂಗಬೇಕಾದ ವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕು. ಪ್ರತಿಯೊಂದು ಗ್ರಾಮ ಮತ್ತು ಪಟ್ಟಣದಲ್ಲೂ ಹೊರಗಿನಿಂದ ಬರುವವರ ವಿವರಗಳನ್ನು ಪಡೆದು ಜಿಲ್ಲಾ ಆಡಳಿತಕ್ಕೆ ಕೊಡುವ ವ್ಯವಸ್ಥೆಯಾಗಬೇಕು. ಅವರನ್ನು ಗಮನಿಸುವ ವ್ಯವಸ್ಥೆ ಪ್ರತಿ ಗ್ರಾಮದಲ್ಲೂ, ವಾರ್ಡ್ಗಳಲ್ಲೂ ಆಗಬೇಕು. ಸ್ಥಳೀಯ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನು ನೀಡಬೇಕು.

ಯಾವ ಗ್ರಾಮಗಳಲ್ಲಿ ಕೋವಿಡ್ ಪತ್ತೆಯಾಗಿದೆಯೋ ಆ ಗ್ರಾಮಗಳಿಗೆ ಮಾತ್ರವೇ ಲಾಕ್‌ಡೌನ್ ಸೀಮಿತಗೊಳಿಸಬೇಕು. ಜಿಲ್ಲೆಯಲ್ಲಿ ಅಗತ್ಯ ವಸ್ತು ಖರೀದಿಗೆ ನಿಗದಿಗೊಳಿಸಿರುವ ಸಮಯವನ್ನು ವಿಸ್ತರಿಸಬೇಕು. ವಾರದ ಮೂರು ದಿನ ಬದಲು ೫ ದಿನ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

ವೀರಾಜಪೇಟೆ ಪಟ್ಟಣದೊಳಗಡೆ ಆಟೋರಿಕ್ಷಾ ಸೇರಿದಂತೆ ವಾಹನಗಳ ಮೇಲೆ ಹೇರಿರುವ ಪ್ರವೇಶ ನಿರ್ಬಂಧ ಹಿಂಪಡೆಯಬೇಕು.ಜನರು ಮಾಸ್ಕ್ ಧರಿಸುವುದನ್ನು, ಸಾಮಾಜಿಕ ಅಂತರವನ್ನು ಕಾಪಾಡುವುದನ್ನು ಇನ್ನಷ್ಟು ಕಠಿಣಗೊಳಿಸಬೇಕು. ಬ್ಯಾಂಕ್‌ಗಳ ಕೆಲಸದ ವೇಳೆಯನ್ನು ಅಂಗಡಿ ಮಳಿಗೆಗಳ ಸಮಯಕ್ಕೆ ಅನುಸಾರವಾಗಿ ಬದಲಾಯಿಸಬೇಕು. ಅಂದರೆ, ಬೆಳಿಗ್ಗೆ ೭ರಿಂದ ಮಧ್ಯಾಹ್ನ ೧.೦೦ ಗಂಟೆಯವರೆಗೆ ಎಂದು ನಿಗದಿಪಡಿಸಬೇಕು ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಅಬ್ದುಲ್ ರೆಹಮಾನ್, ಲೋಕನಾಥ್, ಶರೀಫ್, ಆತೀಕ್ ಮುನ್ನಾ ಉಪಸ್ಥಿತರಿದ್ದರು.