ಸೋಮವಾರಪೇಟೆ, ಜೂ. ೧: ಕೊರೊನಾ ತಡೆಗಟ್ಟಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಶ್ರೀ ಕ್ಷೇತ್ರ ಮನೆಹಳ್ಳಿ ಮಠದ ವತಿಯಿಂದ ಮಧ್ಯಾಹ್ನದ ದಾಸೋಹ ವಿತರಣೆಗೆ ಚಾಲನೆ ನೀಡಲಾಯಿತು.
ಮಠದ ಸ್ವಾಮೀಜಿಗಳಾದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ ಅವರು ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರಿಗೆ ಊಟ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಕೊರೊನಾ ವಾರಿಯರ್ಸ್ ಗಳಾದ ಪಟ್ಟಣ ಪಂಚಾಯಿತಿ, ಪೊಲೀಸ್, ಕಂದಾಯ, ಆಯುಷ್, ವಿದ್ಯುತ್ ಇಲಾಖೆಯ ಸಿಬ್ಬಂದಿಗಳಿಗೆ ಲಾಕ್ಡೌನ್ ಸಮಯದ ಜೂನ್ ೭ರವರೆಗೆ ನಿತ್ಯ ಮಧ್ಯಾಹ್ನ ಮಠದ ವತಿಯಿಂದ ದಾಸೋಹ ನೀಡಲಾಗುವುದು ಎಂದರು.
ಕೊರೊನಾ ಸಂದರ್ಭದಲ್ಲೂ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಇವರೆಲ್ಲರ ಸೇವೆ ಶ್ಲಾಘನೀಯ. ಇವರ ಸೇವೆಯಿಂದ ಕೊರೊನಾ ನಿಗ್ರಹವಾಗಿ ಜನತೆ ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯ ಸೋಮೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಪ್ರಮುಖರಾದ ಮೃತ್ಯುಂಜಯ, ಬಿ.ಪಿ. ಶಿವಕುಮಾರ್, ಯುವರಾಜ್, ಯೋಗೇಶ್, ಎಸ್.ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.