ಸೋಮವಾರಪೇಟೆ, ಜೂ. ೧: ತಾಲೂಕಿನ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ೧೦ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದ್ದು, ಬಡ ಕುಟುಂಬದ ಮಕ್ಕಳಿಗೆ ಆನ್‌ಲೈನ್ ಕಲಿಕೆಗೆ ಆ್ಯಂಡ್ರಾಯ್ಡ್ ಫೋನ್‌ಗಳನ್ನು ದಾನಿಗಳು, ಸಾರ್ವಜನಿಕರು ನೀಡುವ ಮೂಲಕ ಮಕ್ಕಳ ಕಲಿಕೆಗೆ ಸಹಕರಿಸಬೇಕೆಂದು ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಮನವಿ ಮಾಡಿದ್ದಾರೆ.

ಕೋವಿಡ್-೧೯ರ ಹಿನ್ನೆಲೆಯಲ್ಲಿ ೧೦ನೇ ತರಗತಿ ಮಕ್ಕಳು ಪರೀಕ್ಷೆಯನ್ನು ಎದುರಿಸಬೇಕಾಗಿದ್ದು, ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಕೂಲಿ ಕಾರ್ಮಿಕರ ಮಕ್ಕಳು, ಬಡವರ ಮಕ್ಕಳು ೧೦ನೇ ತರಗತಿ ಓದುತ್ತಿದ್ದು, ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕವಾಗುವಂತೆ ಆ್ಯಂಡ್ರಾಯ್ಡ್ ಫೋನ್ ತೆಗೆದುಕೊಡಲು ಅಶಕ್ತರಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೋಧನೆ/ ಕಲಿಕಾಂಶಗಳ ಮಾಹಿತಿಯನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ಕೆಲವೇ ಮಕ್ಕಳು ಪಡೆಯುತ್ತಿದ್ದಾರೆ. ಆದ್ದರಿಂದ ದಾನಿಗಳು ಈ ಬಡ ಮಕ್ಕಳಿಗೆ ಆ್ಯಂಡ್ರಾಯ್ಡ್ ಮೊಬೈಲ್ ನೀಡಬೇಕೆಂದು ಪಾಂಡು ಮನವಿ ಮಾಡಿದ್ದಾರೆ.

ನಾಗರಿಕರು ತಾವು ಉಪಯೋಗಿಸದೇ ಅಥವಾ ಹೆಚ್ಚುವರಿಯಾಗಿ ಹೊಂದಿರುವ ಆ್ಯಂಡ್ರಾಯ್ಡ್ ಫೋನ್ ಇದ್ದಂತಹ ಸಂದರ್ಭಗಳಲ್ಲಿ ತಮ್ಮ ಅಕ್ಕಪಕ್ಕದ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಮಕ್ಕಳಿಗೆ ಫೋನ್ ನೀಡುವ ಮುಖೇನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.