ಮಡಿಕೇರಿ, ಮೇ ೩೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕೊಡಗು ಜಿಲ್ಲೆಯಲ್ಲಿಯೂ ಕೆಲಸದ ಸ್ಥಳದಿಂದಲೇ ಪೋಸ್ಟರ್ ಚಳುವಳಿ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷೆ ಪೂರ್ಣಿಮಾ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಜಿಲ್ಲೆಯ ವಿವಿಧ ಭಾಗದ ಆಶಾ ಕಾರ್ಯಕರ್ತೆಯರು ಭಾಗವಹಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಬೇಕು. ದೂರದ ಮನೆಗಳಿಗೆ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ವಾಹನ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ. ಕೆಲವೆಡೆ ನೆಟ್‌ವರ್ಕ್ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರತಿ ತಿಂಗಳು ಸಿಗಬೇಕಿರುವ ೪ ಸಾವಿರ ಗೌರವಧನ ಕೂಡ ಸರಿಯಾಗಿ ದೊರಕುತ್ತಿಲ್ಲ. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲವೆಂದು ಕಾರ್ಯಕರ್ತೆಯರು ಅಸಮಾಧಾನ ಹೊರಹಾಕಿದರು.

ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸುರಕ್ಷತೆ ಹಾಗೂ ಪ್ರೋತ್ಸಾಹ ನೀಡಬೇಕು. ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷೆ ಪೂರ್ಣಿಮಾ, ಇತರ ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿAದ ಆಶಾ ಕಾರ್ಯಕರ್ತೆಯರಿಗೆ ವೇತನ ದೊರಕಿಲ್ಲ. ಕೊಡಗು ಜಿಲ್ಲೆಯಲ್ಲಿ ೨ ತಿಂಗಳ ವೇತನ ಬಾಕಿ ಇದ್ದು, ಕೊರೊನಾದಂತಹ ಸಂಕಷ್ಟದ ದಿನಗಳಲ್ಲಿ ಜೀವನ ಸಾಗಿಸಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಬಾಕಿ ಇರುವ ವೇತನವನ್ನು ಶೀಘ್ರ ಪಾವತಿ ಮಾಡಬೇಕೆಂದು ಆಗ್ರಹಿಸಿದರು.