ಕಣಿವೆ, ಮೇ ೨೯: ರೈತರ ಜೀವನಾಡಿ ಹಾರಂಗಿ ಜಲಾಶಯಕ್ಕೆ ಇದೀಗ ಮತ್ತೊಮ್ಮೆ ಕೋಟಿಗಟ್ಟಲೆ ಹಣ ವ್ಯಯಿಸಿ ವಿದ್ಯುದೀಕರಣ ಮಾಡಲಾಗುತ್ತಿದೆ. ಮಂಗಳೂರಿನ ಎನರ್ಜನ್ ಕಂಟ್ರೋಲ್ ಅಂಡ್ ಆಟೋ ಮಿಷನ್ ಎಂಬ ಸಂಸ್ಥೆ ಈ ಕಾಮಗಾರಿ ನಿರ್ವಹಿಸುತ್ತಿದೆ. ಡ್ಯಾಂ ಕಂಟ್ರೋಲ್ ಪ್ಯಾನಲ್ ಜನರೇಟರ್ ಕಂಟ್ರೋಲ್, ಜಲಾಶಯದ ಮೇಲ್ಭಾಗದ ಐಬಿಯಿಂದ ಡ್ಯಾಂವರೆಗಿನ ರಸ್ತೆಯ ಬದಿಯಲ್ಲಿ ಇರುವ ಲೈಟ್ ಕಂಬಗಳನ್ನು ತೆಗೆದು ಮತ್ತೆ ಹೊಸ ಕಂಬಗಳೊAದಿಗೆ ಹೊಸದಾಗಿ ವಯರಿಂಗ್ ಕೇಬಲ್‌ಗಳು, ಹಾಗೂ ಬಲ್ಬ್ಗಳನ್ನು ಅಳವಡಿಸಲಾಗುತ್ತಿದೆ. ಇದೀಗ ಲಾಕ್‌ಡೌನ್ ಅನ್ನೋ ಕಾರಣಕ್ಕೆ ಕಾಮಗಾರಿ ಅಪೂರ್ಣಗೊಂಡಿದೆ.

ರೈತರ ಮೂಲ ಅಗತ್ಯತೆಗಳಾದ ಸರಿಯಾದ ಕಾಲುವೆ, ತೂಬುಗಳು ಹಾಗೂ ಕೊನೆಭಾಗದ ರೈತರ ಜಮೀನಿಗೆ ಮುಂಗಾರಿನ ಹಂಗಾಮಿನ ಬೆಳೆಗಳಿಗೆ ಸರಾಗವಾಗಿ ನೀರು ಹರಿಸುವಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಆದರೆ ಸ್ವಯಂ ಜೇಬು ತುಂಬಿಸುವ ಇಂತಹ ಕಾಮಗಾರಿಗಳು ವರ್ಷಕ್ಕೊಮ್ಮೆ ನಡೆಯುತ್ತಲೇ ಇರುತ್ತವೆ. ಏಕೆಂದರೆ ಜಲಾಶಯ ವ್ಯಾಪ್ತಿಯ ರೈತ ಒಕ್ಕೂಟಗಳಿಗೆ, ರೈತ ಮುಖಂಡರಿಗೆ ಇಂತಹ ಅನವಶ್ಯಕ ಹಾಗೂ ಅನಗತ್ಯ ಕಾಮಗಾರಿಗಳ ಬಗ್ಗೆ ಸುಳಿವೇ ಇರಲ್ಲ. ಒಂದು ವೇಳೆ ಇದ್ದರೂ ಕೂಡ ಸಾರ್ವಜನಿಕರ ಹಣವನ್ನು ವೃಥಾ ಪೋಲು ಮಾಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವಂತಿಲ್ಲ. ಹಾಗಾಗಿ ಈ ಜಲಾಶಯ ರೈತರ ಒಳಿತನ್ನು ಮರೆತು ಅಧಿಕಾರಿಗಳು ಹಾಗೂ

(ಮೊದಲ ಪುಟದಿಂದ) ಜನಪ್ರತಿನಿಧಿಗಳ ಹಿತವನ್ನು ಕಾಯುವ ಹಾಗೂ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ.

ಸೋರುತ್ತಿರುವ ಕ್ರೆಸ್ಟ್ ಗೇಟ್ : ಜಲಾಶಯದ ನಾಲ್ಕು ಕ್ರೆಸ್ಟ್ ಗೇಟುಗಳ ಪೈಕಿ ಒಂದು ಗೇಟಿಗೆ ಅಳವಡಿಸಿದ್ದ ರಬ್ಬರ್ ಬೀಡಿಂಗ್ ಸೀಲ್ ಹಾಳಾದ ಕಾರಣ ಜಲಾಶಯದ ನೀರು ಸೋರಿಕೆ ಯಾಗುತ್ತಿದೆ. ಮಳೆಗಾಲ ಸನ್ನಿಹಿತವಾದರೂ ಕೂಡ ತುರ್ತಾಗಿ ಈ ಕ್ರೆಸ್ಟ್ ಗೇಟನ್ನು ಸರಿಮಾಡಿಲ್ಲ. ಜೂನ್ ಮೊದಲ ವಾರದಲ್ಲಿ ಮಳೆಗಾಲ ಆರಂಭವಾಗುವ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದರೂ ಕೂಡ ಅಧಿಕಾರಿಗಳಿಗೆ ಈ ಗೇಟಿನ ಬಗ್ಗೆ ಚಿಂತೆಯೇ ಇಲ್ಲ. ಒಂದು ವೇಳೆ ಮಳೆ ಹೆಚ್ಚು ಸುರಿದು ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬಂದಲ್ಲಿ ಕ್ರೆಸ್ಟ್ ಗೇಟು ಸರಿ ಮಾಡಲು ಅಸಾಧ್ಯ.

ಬದುಕು ಮುಳುಗಿದೆ

ಈ ಹಾರಂಗಿ ಜಲಾಶಯವನ್ನು ನಿರ್ಮಾಣ ಮಾಡಲು ಜಲಾಶಯದ ಮುಳುಗಡೆ ಪ್ರದೇಶದ ಹತ್ತಾರು ಗ್ರಾಮಗಳ ಜನರ ಬದುಕು ಇಂದಿಗೂ ನೀರಿನಲ್ಲಿ ಮುಳುಗಿದೆ. ಅಂದರೆ ಜಲಾಶಯವನ್ನು ನಿರ್ಮಿಸಿ ಬರೋಬ್ಬರಿ ೪೦ ವರ್ಷಗಳಾದರೂ ಕೂಡ ಆ ಮುಳುಗಡೆ ಪ್ರದೇಶದ ಜನರು ಮೂಲ ಸೌಲಭ್ಯಗಳ ಮರೀಚಿಕೆಯಲ್ಲೇ ದಿನಗಳೆಯುತ್ತಿದ್ದಾರೆ. ಜಲಾಶಯದಿಂದ ಅನುಕೂಲ ಪಡೆಯುವ ಕೊಡಗಿನ ಕೇವಲ ನಾಲ್ಕೇ ನಾಲ್ಕು ಪಂಚಾಯಿತಿಗಳ ಕೆಲವೇ ರೈತರಿಗೆ ಇಂದಿಗೂ ಸರಿಯಾಗಿ ಕಾಲುವೆಯಲ್ಲಿ ನೀರು ಹರಿಸದೇ ಭತ್ತದ ಬೆಳೆ ಬೆಳೆಯಲು ರೈತರು ಹರಸಾಹಸ ಪಡುವಂತಹ ವ್ಯವಸ್ಥೆ ಇದೆ. ಈ ಜಲಾಶಯದ ಎಡದಂಡೆ ಕಾಲುವೆಯನ್ನು ಆಶ್ರಯಿಸಿ ಕಣಿವೆ ಬಳಿ ನಿರ್ಮಿಸಿರುವ ಏತ ನೀರಾವರಿ ಯೋಜನೆ ಕೂಡ ಈ ಭಾಗದ ಅರೆ ನೀರಾವರಿ ಪ್ರದೇಶದ ರೈತರಿಗೆ ಅದೊಂದು ವ್ಯರ್ಥ ಯೋಜನೆಯಂತಾಗಿದೆ.

ಏತ ನೀರಾವರಿ ನೀರು ಹರಿಸುವ ಕಾಲುವೆಗಳಾಗಲೀ, ತೂಬುಗಳಾಗಲೀ ಇದೂವರೆಗೂ ಸರಿಯಾಗಿಲ್ಲ. ಈ ಬಗ್ಗೆ ಕಳೆದ ೨೩ ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕರಾದ ಅಪ್ಪಚ್ಚು ರಂಜನ್ ಇದೂವರೆಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಅಗಮಿಸಿ ಈ ಭಾಗದ ರೈತರ ಅಹವಾಲು ಆಲಿಸಲಿಲ್ಲ ಎಂದು ಅಲ್ಲಿನ ರೈತರೇ ದೂರುತ್ತಿದ್ದಾರೆ.

ಅಧಿಕಾರಿಗಳ ಅಸಡ್ಡೆ

ಅದು ಇರಲಿ ಹಾರಂಗಿ ಎಡದಂಡೆ ಕಾಲುವೆಯಿಂದ ಕಳೆದ ೧೫ ವರ್ಷಗಳ ಹಿಂದೆ ಇಲ್ಲಿನ ನಾಲ್ಕು ಪಂಚಾಯಿತಿ ವ್ಯಾಪ್ತಿಯ ಅಂದರೆ ಕೂಡಿಗೆಯಿಂದ ಶಿರಂಗಾಲದವರೆಗೆ ಬೇಸಿಗೆಯ ಬೆಳೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದೂ ಕೂಡ ಸ್ಥಗಿತವಾಯಿತು. ಕಾಲುವೆಗಳು ಹಾಗೂ ತೂಬುಗಳನ್ನು ಸರಿಯಾಗಿ ನಿರ್ವಹಿಸದ ನೀರಾವರಿ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಮಳೆಗಾಲದಲ್ಲಿ ಖಾರೀಫ್ ಬೆಳೆಗೆಂದು ಹರಿಸುವ ನೀರೆಲ್ಲಾ ಪೋಲಾಗಿ ಕಾವೇರಿ ನದಿಯ ಪಾಲಾಗುವುದನ್ನು ತಪ್ಪಿಸಿದಲ್ಲಿ ಈಗಲೂ ಈ ಭಾಗದ ರೈತರಿಗೆ ಬೇಸಿಗೆಯ ಬೆಳೆಗೆ ನೀರನ್ನು ಸರಾಗವಾಗಿ ಹರಿಸಬಹುದು. ಆದರೆ ಅನ್ನದಾತರ ಬಗ್ಗೆ ನಿರಾಸಕ್ತಿ ತಾಳಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಿಂದಾಗ್ಗೆ ವಿದ್ಯುದೀಕರಣ, ನಾಲೆಗಳ ಆಧುನೀಕರಣ, ಉದ್ಯಾನವನದ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾರಣಗಳೊಡ್ಡಿ ಸರಕಾರದಿಂದ ಬಹು ಕೋಟಿಗಳ ಅನುದಾನ ತಂದು ಅನಗತ್ಯವಾಗಿ ಪೋಲು ಮಾಡುವ ಬೆಳವಣಿಗೆ ಇನ್ನಾದರೂ ನಿಲ್ಲಬೇಕಿದೆ. ರೈತರ ಹಿತದೃಷ್ಟಿಯಿಂದ ರೈತರ ಮೇರು ಅಗತ್ಯಗಳಾದ ಸಮರ್ಪಕವಾದ ಕಾಲುವೆ ನಿರ್ಮಿಸಿ ಆ ಕಾಲುವೆಯಲ್ಲಿ ಸರಿಯಾಗಿ ನೀರು ಹರಿಸುವ ತೂಬುಗಳನ್ನು ನಿರ್ಮಿಸಿ ಆ ನೀರು ಕೊನೆ ಭಾಗದಲ್ಲಿನ ರೈತರ ಜಮೀನಿಗೆ ಹರಿಸಿದರೇ ಅಷ್ಟೇ ಸಾಕು ಎನ್ನುತ್ತಾರೆ ತೊರೆನೂರಿನ ಕೃಷಿಕ ಟಿ.ಜಿ.ಲೋಕೇಶ್, ಶಿವಣ್ಣ, ಸೀಗೆಹೊಸೂರಿನ ವಿಶ್ವನಾಥ್, ಭುವನಗಿರಿಯ ಗೋವಿಂದಪ್ಪ, ಹೆಬ್ಬಾಲೆಯ ದಿನೇಶ್, ಮರೂರಿನ ನಾಗರಾಜು, ಶಿರಂಗಾಲದ ರಾಜಪ್ಪ.

ಜಲಾಶಯದ ನಿರ್ವಹಣೆಯೂ ಅತಿ ಮುಖ್ಯ. ಆದರೆ ರೈತರ ಹಿತ ಕಡೆಗಣಿಸಿ ಜಲಾಶಯದ ಮೇಲೆ ಅದರ ಅಂದ ಚೆಂದದ ಹೆಸರಲ್ಲಿ ಕೋಟಿಗಟ್ಟಲೆ ಹಣ ಅಪವ್ಯಯ ತಪ್ಪಿಸಬೇಕಿದೆ. ಕೋಟ್ಯಾಂತರ ರೂಗಳನ್ನು ವ್ಯಯಿಸಿ ಒಮ್ಮೆ ಮಾಡಿದ ಕಾಮಗಾರಿಯನ್ನು ಆ ಕಾಮಗಾರಿಯ ಟೆಂಡರ್ ಪಡೆದ ಸಂಸ್ಥೆ ಅಥವಾ ವ್ಯಕ್ತಿ ಕನಿಷ್ಟ ಮುಂದಿನ ಮೂರು ವರ್ಷಗಳ ಕಾಲ ನಿರ್ವಹಿಸಬೇಕೆಂಬ ನಿಯಮಗಳಿದ್ದರೂ ಕೂಡ ಪ್ರತೀ ವರ್ಷ ಟೆಂಡರ್ ಕರೆದು ಇಂತಹ ಕಾಮಗಾರಿಗಳನ್ನು ನಿರ್ವಹಿಸುವುದು ಇನ್ನಾದರೂ ತಪ್ಪಬೇಕಿದೆ ಅಷ್ಟೆ.

-ಕೆ.ಎಸ್. ಮೂರ್ತಿ