
ಸೋಮವಾರಪೇಟೆ,ಮೇ ೨೯: ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಪ್ರವೇಶವನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಕೊಡ್ಲಿಪೇಟೆ ಸಮೀಪದ ಕಡೇಪೇಟೆಯಲ್ಲಿ ಹೆಚ್ಚುವರಿಯಾಗಿ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯ ಗಡಿಭಾಗದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ ಹಾಗೂ ನಿಲುವಾಗಿಲುವಿನಲ್ಲಿ ಈಗಾಗಲೆ ಚೆಕ್ಪೋಸ್ಟ್ ತೆರೆದಿದ್ದು, ಪೊಲೀಸರು ಶಿಕ್ಷಕರು,ಆಶಾ ಕಾರ್ಯಕರ್ತೆಯರು ವಿವಿಧ ಪಾಳಿಗಳಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ.
ಈ ತಂಡ ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆಗೊಳಪಡಿಸುತ್ತಿರುವ ಹಿನ್ನೆಲೆ ಇದರಿಂದ ತಪ್ಪಿಸಿಕೊಳ್ಳಲು ಹಲವಷ್ಟು ಮಂದಿ ಒಳ ದಾರಿಗಳ ಮೊರೆ ಹೋಗಿದ್ದಾರೆ. ಚೆಕ್ಪೋಸ್ಟ್ ಒಳಗಿರುವ ಪ್ರದೇಶಗಳಲ್ಲಿ ಓಡಾಡುವ ವಾಹನಗಳ ಮೇಲೆ ಕಣ್ಣಿಡಲು ಕ್ಯಾತೆ ಗ್ರಾಮದ ಮೂಲಕ ಯಸಳೂರಿಗೆ ಹೋಗುವ ಕಡೇಪೇಡೆ
(ಮೊದಲ ಪುಟದಿಂದ) ಸರ್ಕಲ್ನಲ್ಲಿ ನೂತನವಾಗಿ ಬ್ಯಾರಿಕೇಡ್ ಹಾಕಿ ಚೆಕ್ಪೋಸ್ಟ್ ತೆರೆದು ತಪಾಸಣೆ ನಡೆಸಲಾಗುತ್ತಿದೆ.
ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಸೇರಿದಂತೆ ಇನ್ನಿತರ ಕಾರಣಗಳನ್ನು ಹೇಳಿ ನಗರದಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳ ಮೇಲೆ ಕಣ್ಣಿಡಲಾಗುತ್ತಿದೆ. ಇದರೊಂದಿಗೆ ಶಾಂತಪುರದಲ್ಲಿ ಈಗಾಗಲೇ ಚೆಕ್ಪೋಸ್ಟ್ ಇರುವುದರಿಂದ ಹಾಸನ ಅಥವಾ ಸಕಲೇಶಪುರಕ್ಕೆ ತೆರಳುವವರು ಯಸಳೂರು ಮೂಲಕ ಸಂಚರಿಸುವುದು ಕಂಡು ಬಂದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಹೊರ ಜಿಲ್ಲೆಗೆ ತೆರಳುವ ಮಂದಿಯ ಮೇಲೆ ನಿಗಾ ಇಡಲು ಕಡೇಪೇಟೆ ಸರ್ಕಲ್ ನಲ್ಲಿ ತಪಾಸಣೆ ಕೈ ಗೊಳ್ಳಲಾಗಿದೆ ಎಂದು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ದೇವರಾಜ್ ತಿಳಿಸಿದ್ದಾರೆ. ಚೆಕ್ಪೋಸ್ಟ್ನಲ್ಲಿ ಪೊಲೀಸ್ ಸಿಬ್ಬಂದಿ ಸೋಮಶೇಖರ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿ ಹರೀಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.