ಆಧುನಿಕ ದಿನಗಳಲ್ಲಿ ಬೆಳಕಿಲ್ಲದ ಕತ್ತಲ ದಿನಗಳನ್ನು ಯೋಚಿಸಲೇ ಆಗದ ಸ್ಥಿತಿಯಲ್ಲಿದ್ದೇವೆ. ಮನೆಯಲ್ಲಿ ಬೆಳಕಿಲ್ಲದ ಕ್ಷಣಗಳು ಮನಸ್ಸಿಗೂ ಗಾಡಾಂಧಕಾರದAತೆ ಕವಿದುಬಿಡುತ್ತದೆ....

ಮಳೆ ಇರಲಿ, ಬಿರುಗಾಳಿಯೇ ಇರಲಿ, ಸಿಡಿಲು.. ಮಿಂಚಿನ ಅಬ್ಬರವೇ ಇರಲಿ.. ಮರಬೀಳುತ್ತಿರಲಿ... ಕಂಬಗಳೇ ಉರುಳುತ್ತಿರಲಿ.. ಎಲ್ಲಾ ಸಂಕಷ್ಟಗಳು, ಎಲ್ಲಾ ಸವಾಲುಗಳನ್ನು ಕೆಚ್ಚೆದೆಯಿಂದ ಎದುರಿಸುತ್ತಲೇ ವಿಕೋಪ ಎಂಬ ರಣಾಂಗಣದಲ್ಲಿ ಮುನ್ನುಗ್ಗುತ್ತ ಬೆಳಕು ಎಂಬ ಆಶಾಕಿರಣದ ಸಂಪರ್ಕ ನೀಡುತ್ತಿರುವ ಈ ನೂರಾರು ಕರ್ಮಯೋಗಿಗಳು ನಿಜವಾಗಿಯೂ ಸಮರ ಸೈನಿಕರು.. ಇವರು ನಮ್ಮ ಪವರ್ ಮ್ಯಾನ್‌ಗಳು.

ಚೆಸ್ಕಾಂ ಇಲಾಖೆಯಲ್ಲಿ ಹಗಲಿರುಳು ದುಡಿಯುತ್ತಾ ನಗರ, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಕಾರಣವಾಗಿರುವ ಇವರು ಮನೆ ಮತ್ತು ಬೆಳಕಿನ ನಡುವಿನ ಸಂಪರ್ಕ ಸೇತುಗಳು... ಕೊಡಗಿನ ಮೂಲೆಮೂಲೆಗಳಲ್ಲಿ ಸಕ್ರಿಯರಾಗಿರುವ ಈ ಸೈನಿಕರ ಸಂಖ್ಯೆ ೨೯೬. ಜಿಲ್ಲೆಯಲ್ಲಿ ಇವರಿಂದಾಗಿ ೨,೧೧,೩೯೯ ಮನೆಗಳ ವಿದ್ಯುತ್ ದೀಪಗಳ ಬೆಳಕು ಕಾಣುತ್ತಿದೆ.

ವಿದ್ಯುತ್ ಹೋದಾಗ ಏಕಾಏಕಿ ಇವರ ನೆನಪಾಗುತ್ತದೆ.. ಕರೆಂಟ್ ಹೋಯಿತಲ್ಲ ಎಂದು ಸಿಟ್ಟು ಬರುತ್ತದೆ. ಆಕ್ರೋಷ ಹೆಚ್ಚಾಗುತ್ತದೆ.. ಪವರ್ ಮ್ಯಾನ್‌ಗಳು ಟೀಕೆಗೆ ಕಾರಣರಾಗುತ್ತಾರೆ.. ಬಾಯಿಗೆ ಬಂದAತೆ ಹಲವರು ಇವರನ್ನು ಬೈಯುತ್ತಾರೆ.. ಹೊತ್ತಲ್ಲದ ಹೊತ್ತಿನಲ್ಲಿ ಕರೆಂಟ್ ತೆಗೆಯುತ್ತಾರೆ.. ಏನ್ ಕೆಲ್ಸ ಮಾಡುತ್ತಾರೋ ಎಂದು ಸಿಟ್ಟು ಹೊರಹಾಕುತ್ತೇವೆ.. ಆದರೆ... ಪವರ್ ಮ್ಯಾನ್‌ಗಳ ಸ್ಥಿತಿ ಎಂಥದ್ದು ಎಂದು ತಿಳಿದುಕೊಳ್ಳುವ ಗೋಜಿಗೇ ಹೋಗದಂತಿರುತ್ತೇವೆ.. ಕರೆಂಟ್ ಬರುತ್ತೆ. ಆ ಸಂದರ್ಭ ಇವರ ಕರ್ತವ್ಯವನ್ನು ಎಲ್ಲರೂ ಮರೆತೇ ಬಿಡುತ್ತಾರೆ... ಕತ್ತಲಿನಲ್ಲಿ ಮಾತ್ರ ಇವರ ಯೋಚನೆಯಾಗುವ ವಿಪರ್ಯಾಸದ ಕೆಲಸ ಇವರದ್ದು...

ಕೊರೊನಾ ಸಂಕಷ್ಟದ ದಿನಗಳಲ್ಲಿಯೇ ಕೊಡಗಿನ ಚೆಸ್ಕಾಂ ಸಿಬ್ಬಂದಿಗಳಿಗೆ ಮತ್ತೊಂದು ಸವಾಲಿನ ದಿನಗಳು ಎದುರಾಗುತ್ತಿದೆ. ಮುಂದಿನ ೬ ತಿಂಗಳ ಮುಂಗಾರು ದಿನಗಳ ಸಮಸ್ಯೆಗಳ ಸರಮಾಲೆ ಎದುರಿಸಲು ಚೆಸ್ಕಾಂ ಸಿಬ್ಬಂದಿ ತಯಾರಿ ಕೈಗೊಂಡಿದ್ದಾರೆ.

ಕೊಡಗಿನ ಮೂಲೆಮೂಲೆಗಳಲ್ಲಿ ವಿದ್ಯುತ್ ಸಂಪರ್ಕ ಸುಸ್ಥಿತಿಯಲ್ಲಿಡಲು ಈಗಾಗಲೇ ಸಮರೋಪಾದಿಯಲ್ಲಿ ಚೆಸ್ಕಾಂನಿAದ ಕಾರ್ಯಾಚರಣೆ ನಡೆಯುತ್ತಿದೆ. ತೋಟಗಳ ನಡುವೇ ಹಾದುಹೋಗಿರುವ ವಿದ್ಯುತ್ ತಂತಿಗಳ ಪರಿಶೀಲನೆ, ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕಡಿದು ಸಮಸ್ಯೆಯಾಗದಂತೆ ಗಮನ ಹರಿಸಲಾಗುತ್ತಿದೆ. ಕಾಡಿನಂಚಿನಲ್ಲಿಯೂ ವಿದ್ಯುತ್ ಪ್ರಸರಣ ವ್ಯವಸ್ಥೆ ಬಗ್ಗೆ ನಿಗಾ ವಹಿಸಲಾಗಿದೆ.

ಕೊರೊನಾ ಕಾಲದಲ್ಲಿಯೂ ಚೆಸ್ಕಾಂ ಸಿಬ್ಬಂದಿಗಳು ವಿರಮಿಸದೇ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ವಿದ್ಯುತ್ ಸಮಸ್ಯೆಯಿದ್ದ ಕಡೆಗಳಿಗೆ, ಮನೆಗಳಿಗೆ ತೆರಳಿ ಸಮಸ್ಯೆ ನಿವಾರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದರು.

ಹೀಗಾಗಿ ಈವರೆಗೆ ೩೨ ಮಂದಿ ಚೆಸ್ಕಾಂ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ಬರುವಂತಾಯಿತು. ಹೀಗಿದ್ದರೂ ಧೃತಿಗೆಡದೆ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಸಮಸ್ಯೆಯ ಸವಾಲು ಈ ವರ್ಷ ಹೆಚ್ಚಾಗಿದೆ. ಆದರೂ ಎಲ್ಲವನ್ನೂ ತಂಡ ಸ್ಫೂರ್ತಿಯಿಂದ ನಿಭಾಯಿಸಿಕೊಂಡು ಬಂದಿದ್ದೇವೆ ಎಂದು ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಅಶೋಕ್ ತಿಳಿಸಿದರು.

೨೦೧೮ ರ ಪ್ರಾಕೃತಿಕ ವಿಕೋಪದಲ್ಲಿ ಜಿಲ್ಲೆಯಲ್ಲಿ ೩ ಸಾವಿರದಷ್ಟು ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು ಹೊಸ ಕಂಬ ಅಳವಡಿಸಿ ಎಲ್ಲವನ್ನೂ ಸರಿಪಡಿಸಲಾಗಿತ್ತು. ಈ ವರ್ಷ ಮುಂಜಾಗ್ರತೆಯಾಗಿ ಅಗತ್ಯವಿರುವ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳೂ ಸೇರಿದಂತೆ ಇತರ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಅಗತ್ಯವಿರುವ ವಾಹನಗಳನ್ನೂ ಸಿಬ್ಬಂದಿಗಳಿಗೆ ನೀಡಲಾಗಿದೆ. ಕೆಲವೇ ಹೊತ್ತಿನಲ್ಲಿ ಸಮಸ್ಯೆ ಇರುವ ಸ್ಥಳಕ್ಕೆ ಪವರ್ ಮ್ಯಾನ್‌ಗಳು ತಲುಪಬಹುದಾಗಿದೆ ಎಂದು ಹೇಳಿದ ಅಶೋಕ್, ಗುಡ್ಡಗಾಡು, ಕಾಡು, ಗ್ರಾಮೀಣ ಪ್ರದೇಶಗಳಿಂದಾಗಿ ಕೊಡಗಿನಲ್ಲಿ ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ಚೆಸ್ಕಾಂ ಸಿಬ್ಬಂದಿಗಳಿಗೆ ಸದಾ ಬಹಳ ದೊಡ್ಡ ಸವಾಲು ವಿದ್ಯುತ್ ನೀಡುವಲ್ಲಿ ಎದುರಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ ವಲಯಗಳನ್ನು ಮುಂಗಾರಿನಲ್ಲಿ ಅತೀ ಹೆಚ್ಚು ನಿಗಾವಲಯಗಳೆಂದು ಪರಿಗಣಿಸಲಾಗಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯಾದ್ಯಂತಲಿನ ೧೬ ಕೋವಿಡ್ ಕೇರ್ ಸೆಂಟರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲದಂತೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಆಕ್ಸಿಜನ್ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೂ ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ತೀವ್ರ ನಿಗಾವಹಿಸಿದ್ದಾರೆ. ಮಳೆಗಾಲದಲ್ಲಿ ಪವರ್ ಮ್ಯಾನ್‌ಗಳಿಗೆ ಅಗತ್ಯವಾದ ಹ್ಯಾಂಡ್ ಗ್ಲೌಸ್, ರೇನ್ ಕೋಟ್, ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ಜಿಲ್ಲೆಯಲ್ಲಿನ ಸಿಬ್ಬಂದಿಗಳಿಗೆ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ದಿನದ ೨೪ ಗಂಟೆಯೂ ವಿದ್ಯುತ್ ಸಂಪರ್ಕ ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪಡೆಯನ್ನೂ ರಚಿಸಲಾಗಿದ್ದು, ಮುಂಗಾರಿನಲ್ಲಿ ಕಾರ್ಯನಿರ್ವಹಿಸಲು ೧೪ ವಾಹನಗಳು, ೪ ಮಿನಿ ಲಾರಿ, ೧೪೦ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗುತ್ತಿದೆ, ಕೊಡಗಿನ ಅಗತ್ಯಗಳಿಗೆ ಸ್ಪಂದಿಸಿರುವ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವೈಭವ ಸ್ವಾಮಿ ಎಲ್ಲಾ ಅಗತ್ಯತೆಗಳನ್ನೂ ಪೂರೈಸಿದ್ದಾರೆ ಎಂದು ಅಶೋಕ್ ಹೆಮ್ಮೆಯಿಂದ ತಿಳಿಸಿದರು.

ಕಾಡು ಮೇಡು ಸುತ್ತಬೇಕಾಗಿರುತ್ತದೆ. ತೋಟಗಳ ಮಧ್ಯೆ ಕಠಿಣ ಹಾದಿಯಲ್ಲಿ ನಡೆದು ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಬೃಹತ್ತಾಕಾರದ ಮರಗಳು, ರೆಂಬೆ ಕೊಂಬೆಗಳನ್ನು ತೆಗೆದು ಮತ್ತೆ ಲೈನ್ ಎಳೆದು ವಿದ್ಯುತ್ ಸಂಪರ್ಕ ಮರು ಸ್ಥಾಪಿಸಬೇಕಾಗಿರುತ್ತದೆ. ಇದೆಲ್ಲಾ ಸವಾಲಿನ ಕೆಲಸ.. ಮಳೆ ಜೋರಾಗಿರುವ ಸಂದರ್ಭಗಳಲ್ಲಿ ನಮ್ಮ ಮೇಲೇ ಮರ ಬೀಳುವ ಎಲ್ಲಾ ಸಾಧ್ಯತೆಗಳಿರುತ್ತದೆ. ಊಟ, ಸಮಯದ ಯೋಚನೆಯಿಲ್ಲದೇ ಕೆಲಸ ಮಾಡಬೇಕಾಗಿರುತ್ತದೆ ಎಂದು ಮಾದಾಪುರದ ಪವರ್ ಮ್ಯಾನ್ ಬಾಬು ಕೆಲಸದ ಸ್ಥಿತಿಯನ್ನು ಹೇಳಿಕೊಂಡರು. ದಕ್ಷಿಣ ಕೊಡಗಿನಲ್ಲಿ ಮಳೆಗಾಲದಲ್ಲಿ ನದಿ ಪ್ರವಾಹವನ್ನೂ ಎದುರಿಸಬೇಕಾಗಿದೆ. ತುಂಬಿ ಹರಿಯುವ ನದಿ ತೊರೆಗಳನ್ನು ದಾಟಿ ಕಡಿದು ಹೋಗಿರುವ ವಿದ್ಯುತ್ ಸಂಪರ್ಕ ಮರು ಜೋಡಿಸಬೇಕಾಗಿರುತ್ತದೆ. ಜನರು ಒಳ್ಳೆಯವರು, ನಮ್ಮ ಸಿಬ್ಬಂದಿಗಳಿಗೆ ಪ್ರತೀ ಗ್ರಾಮದಲ್ಲಿಯೂ ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಬಾಳೆಲೆಯ ಜೂನಿಯರ್ ಇಂಜಿನಿಯರ್ ರಂಗಸ್ವಾಮಿ ಸ್ಮರಿಸಿಕೊಂಡರು.

ಟೀಕೆಗಳು ಕೇಳಲಿ. ಹೊಗಳಿಕೆ ಕೇಳದೇ ಇರಲಿ... ಮನೆ ಮನೆಗಳು, ನಗರ, ಗ್ರಾಮಗಳು ವಿದ್ಯುತ್ ದೀಪದಿಂದ ಬೆಳಗಿದಾಗ ಆವರೆಗೆ ಪಟ್ಟ ಕಷ್ಟಗಳು ಕರಗಿ... ಇವರ ಮನಸ್ಸೂ ಕೂಡ ತಮ್ಮ ಕೆಲಸವನ್ನು ತೃಪ್ತಿಕರವಾಗಿ ನಿರ್ವಹಿಸಿದ ಸಂತೋಷದಲ್ಲಿ ಬೆಳಗಿರುತ್ತದೆ..

ನಿಜವಾಗಿಯೂ ಇವರು ಪವರ್ - ಮ್ಯಾನ್‌ಗಳು..

ಮುಂಗಾರಿನ ಸಮರ ಸೈನಿಕರು..!!!

- ಅನಿಲ್ ಎಚ್.ಟಿ.