ಮಡಿಕೇರಿ, ಮೇ ೨೭: ಪ್ರಸ್ತುತ ಕೋವಿಡ್ ಸಂಕಷ್ಟದ ಸಮಯದಲ್ಲಿ ಹತ್ತು ಹಲವು ಸಂಕಷ್ಟಗಳಿಗೆ ಗುರಿಯಾಗಿರುವ ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರವು ರಿಯಾಯಿತಿ ಬಡ್ಡಿದರದ ಸಾಲ ಯೋಜನೆಗಳ ಮರು ಪಾವತಿ ಅವಧಿಯನ್ನು ವಿಸ್ತರಿಸಿರುವ ಕ್ರಮವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ವಾಗತಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ರಾಜ್ಯ ಸರಕಾರವು ರಿಯಾಯಿತಿ ಬಡ್ಡಿದರದ ಸಾಲ ಯೋಜನೆಗಳಾದ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆಸಾಲ ಶೇ. ೩ರ ಬಡ್ಡಿ ದರದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ, ಕೃಷಿ ಸಂಬAಧಿತ ಸಾಲ ಯೋಜನೆ, ಸ್ವಸಹಾಯ ಗುಂಪುಗಳ ಸಾಲ ಯೋಜನೆಯಡಿ ಪಡೆದ ಸಾಲಗಳ ಮರುಪಾವತಿ ಅವಧಿಯನ್ನು ವಿಸ್ತರಿಸಿದೆ. ತಾ. ೧.೪.೨೦೨೧ ರಿಂದ ೩೦.೬.೨೦೨೧ರ ಅವಧಿಯಲ್ಲಿ ಮರುಪಾವತಿ ಗಡುವು ಬರುವ ಸಾಲಗಳ ಮರುಪಾವತಿಗೆ ೩೦.೬.೨೦೨೧ರ ವರೆಗೆ ಸಮಯಾವಕಾಶ ಕಲ್ಪಿಸಿರುವುದು ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ಡಿಸಿಸಿ ಬ್ಯಾಂಕ್ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಬ್ಯಾಂಕ್‌ನ ವಿವಿಧ ಶಾಖೆ ಹಾಗೂ ಕೃಷಿಪತ್ತಿನ ಸಂಘದ ಹಲವಾರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಂಡುಬರುತ್ತಿದ್ದು, ಸಿಬ್ಬಂದಿಗಳಿಗೆ ಆದ್ಯತೆ ಮೇಲೆ ಲಸಿಕೆ ನೀಡಲು ಈಗಾಗಲೇ ಮನವಿ ಮಾಡಲಾಗಿದೆ. ಆದರೆ ಇದಕ್ಕೆ ಸ್ಪಂದನ ದೊರೆತಿಲ್ಲ ಎಂದಿರುವ ಅವರು, ಬ್ಯಾಂಕ್‌ನ ನೌಕರರು ಹಾಗೂ ರೈತರು ಹತ್ತಿರದ ಸಂಬAಧ ಹೊಂದಬೇಕಿರುವುದು ಅನಿವಾರ್ಯವಾಗಿರುವುದರಿಂದ ಹಾಗೂ ಇದು ಮಹತ್ವದ ಸಮಯವೂ ಆಗಿರುವುದರಿಂದ ಲಸಿಕೆ ನೀಡಲು ಸಿಬ್ಬಂದಿಗಳನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಸ್ಪಂದಿಸಬೇಕೆAದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಸಿಇಓ ಬಾಲಶೇಖರ್, ಪ್ರಧಾನ ವ್ಯವಸ್ಥಾಪಕ ಕೆ.ಕೆ. ಪೂವಯ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಗಿರೀಶ್, ಆಪ್ತ ಸಹಾಯಕ ಸಿ.ಎಸ್. ಗಣಪತಿ ಪಾಲ್ಗೊಂಡಿದ್ದರು.