ಕುಶಾಲನಗರ, ಮೇ ೨೭: ಇದೀಗ ಕೊರೊನಾ ೨ನೇ ಅಲೆಯ ಬೆನ್ನಲ್ಲೇ ಮೂರನೇ ಕೋವಿಡ್ ಅಲೆಯ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದ್ದು ಕೊಡಗು ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಾರ್ಯಯೋಜನೆಗೆ ಮುಂದಾಗಿದ್ದಾರೆ. ಕೊಡಗು ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಪೂರ್ವ ಸಿದ್ಧತೆಗೆ ಸಜ್ಜಾಗಿರೋದು ಗೋಚರಿಸಿದೆ. ಪ್ರಸಕ್ತ ಜಿಲ್ಲೆಯಲ್ಲಿ ಲಭ್ಯವಿರುವ ಸಮಾಜ ಕಲ್ಯಾಣ ಇಲಾಖೆಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಸತಿ ನಿಲಯಗಳನ್ನು ಕೋವಿಡ್ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಮೂರನೇ ಅಲೆಯ ಸಿದ್ಧತೆಗೆ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಸರ್ಕಾರಿ ಶಾಲೆಗಳನ್ನು ಕೋವಿಡ್ ಕಾಳಜಿ ಕೇಂದ್ರಗಳನ್ನಾಗಿ ಸಿದ್ಧಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಪ್ರತೀ ಶಾಲೆಯಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ. ೨ನೇ ಅಲೆಯ ಜತೆಜತೆಗೆ ಮೂರನೇ ಅಲೆ ವಕ್ಕರಿಸುವ ಬಗ್ಗೆ ತಜ್ಞರ ಮಾಹಿತಿಗಳು ಹೊರಬಿದ್ದಿದ್ದು, ಇದರಿಂದ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದ್ದು, ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕುಶಾಲನಗರದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮೊದಲ ಅಲೆಗಿಂತ ಈಗ ಹೆಚ್ಚಿನ ಮಕ್ಕಳಿಗೆ ಸೋಂಕು ತಗಲುತ್ತಿದೆ. ಅಂಕಿ ಅಂಶಗಳ ಪ್ರಕಾರ ಈ ಸಾಲಿನಲ್ಲಿ ೨ನೇ ಅಲೆಯಲ್ಲಿ ಮಕ್ಕಳು ಸಾವಿಗೀಡಾಗಿದ್ದಾರೆ ಎನ್ನುವ ಆಘಾತಕಾರಿ ವರದಿಗಳು ಲಭಿಸಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ೧೯ ವೈರಾಣು ಸೋಂಕನ್ನು ತಡೆಗಟ್ಟಲು ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶವಾಸಿಗಳ ಹಿತದೃಷ್ಟಿಯಿಂದ ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆಯುಷ್ ಮತ್ತಿತರ ಪದವೀಧರ ವೈದ್ಯರ ಸೇವೆಯನ್ನು ಎರವಲು ಪಡೆದು ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಒಂದೇಕಡೆ ವೈದ್ಯರ ಲಭ್ಯತೆಯೊಂದಿಗೆ ಗಂಟಲು ಮಾದರಿ ಪರೀಕ್ಷೆ ನಡೆಸುವುದು, ಸ್ಥಳದಲ್ಲೇ ಚಿಕಿತ್ಸೆ ನೀಡುವುದು, ಅವಶ್ಯಕತೆ ಇರುವವರಿಗೆ ವೈದ್ಯಕೀಯ ಕಿಟ್ ವಿತರಿಸುವುದು ಪ್ರಸಕ್ತ ರಾಜ್ಯ ಸರ್ಕಾರದ ಕಾರ್ಯ ಯೋಜನೆಯಾಗಿದೆ. ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮ ಶೀಘ್ರವಾಗಿ ಹಮ್ಮಿಕೊಳ್ಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು ಕಾರ್ಯಕ್ರಮ ಸಧ್ಯದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ತಿಳಿದುಬಂದಿದೆ.
- ಚಂದ್ರಮೋಹನ್