ಸೋಮವಾರಪೇಟೆ, ಮೇ ೨೬: ಗೂಡ್ಸ್ ಆಟೋ ಮತ್ತು ಪ್ಯಾಸೆಂಜರ್ ಆಟೋಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಾಲಕ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಮೀಪದ ಗೋಣಿಮರೂರು ಗ್ರಾಮದಲ್ಲಿ ನಡೆದಿದೆ.

ಬೆಂಬಳೂರು ಗ್ರಾಮದ ಕೃಷ್ಟಪ್ಪ ಎಂಬವರ ಪುತ್ರ ಭುವನ್(೧೪) ಎಂಬಾತನೇ ಮೃತ ದುರ್ದೈವಿ. ಭುವನ್ ಮತ್ತು ಆತನ ಅಜ್ಜಿ ಜಯ ಅವರುಗಳು ಕುಶಾಲನಗರದಿಂದ ಗೋಣಿಮರೂರಿಗೆ ರಾತ್ರಿ ಪ್ಯಾಸೆಂಜರ್ ಆಟೋದಲ್ಲಿ ಬರುವ ಸಂದರ್ಭ ಗ್ರಾಮದ ಸರ್ಕಾರಿ ಶಾಲೆಯ ಬಳಿ ದುರ್ಘಟನೆ ಸಂಭವಿಸಿದೆ.

ಶಾಲೆಯ ಮುಂಭಾಗ ಎದುರಿನಿಂದ ಬಂದ ಅಪೇ ಗೂಡ್ಸ್ ವಾಹನ ಡಿಕ್ಕಿಪಡಿಸಿದ್ದರಿಂದ ಆಟೋದಲ್ಲಿದ್ದ ಭುವನ್ ಹಾಗೂ ಅವನ ಅಜ್ಜಿ ಜಯ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.