ಶನಿವಾರಸಂತೆ, ಮೇ ೨೬: ಕೋವಿಡ್ ೨ನೇ ಅಲೆ ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಾ ಜನರಲ್ಲಿ ಭಯಭೀತಿ ಮೂಡಿಸುತ್ತಿದೆ. ಜನ ಜೀವನ್ಮರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ದೃಢಪಡುತ್ತಾ ಎಷ್ಟೋ ಹಳ್ಳಿಗಳು ಸೀಲ್‌ಡೌನ್‌ಗೆ ಒಳಪಟ್ಟಿವೆ. ಆದರೆ, ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಟ್ಟಗಾನಹಳ್ಳಿ, ಹೆಮ್ಮನೆ, ಅರೆಹಳ್ಳಿ, ಕೋರಗಲ್, ಕೆರಕೇರಿ, ಚಿಕ್ಕಾಕುಂದ ೬ ಗ್ರಾಮಗಳು ಮಾತ್ರ ಕೊರೊನಾ ಸೋಂಕು ಇಲ್ಲದ ಕೋವಿಡ್ ಮುಕ್ತ ಗ್ರಾಮಗಳಾಗಿ ಜಿಲ್ಲೆಯ ಉಳಿದ ಗ್ರಾಮಗಳಿಗೆ ಮಾದರಿಯಾಗಿವೆ.

ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಅಧ್ಯಕ್ಷ ಕೀರ್ತಿ, ಉಪಾಧ್ಯಕ್ಷೆ ಕುಸುಮಾ, ಸದಸ್ಯರು, ಪಿಡಿಓ ಎಸ್.ಸಿ. ಸುರೇಶ್, ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ, ಕೊರೊನಾ ವಾರಿಯರ್ಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಿಸ್ವಾರ್ಥ ಕರ್ತವ್ಯ, ಮುಂಜಾಗ್ರತಾ ಕ್ರಮ ದಿಂದಾಗಿ ೬ ಗ್ರಾಮಗಳಲ್ಲಿ ಸೋಂಕು ದೃಢಪಟ್ಟಿಲ್ಲ. ಕೋವಿಡ್ ಮುಕ್ತ ಗ್ರಾಮಗಳಾಗಿ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ.

ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಜನಸಂಖ್ಯೆ ೫,೮೩೬ ಇದೆ. ೬ ಮುಖ್ಯ ಗ್ರಾಮಗಳು ಹಾಗೂ ೧೮ ಉಪ ಗ್ರಾಮಗಳಿವೆ. ವ್ಯವಸಾಯ ಮತ್ತು ಕೂಲಿ ಮುಖ್ಯ ಕಸುಬಾಗಿದೆ. ಇತರ ಗ್ರಾಮಗಳಲ್ಲಿ ಸೋಂಕು ವ್ಯಾಪಿಸಿದೆ. ಗ್ರಾಮ ಪಂಚಾಯಿತಿ ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸುತ್ತಿದ್ದು, ಸರಕಾರದ ಮಾರ್ಗಸೂಚಿ ಅನುಸರಿಸುವಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಕಾನೂನು ಕ್ರಮದ ಅರಿವು ಮೂಡಿಸಿ ಜಾಗೃತಿ ಉಂಟುಮಾಡಿದೆ.

೬ ಗ್ರಾಮಗಳಲ್ಲಿ ಪ್ರತಿಯೊಂದು ಗ್ರಾಮವು ೬೦-೭೦ ಕುಟುಂಬಗಳನ್ನು ಹೊಂದಿದ್ದು, ೨೦೦-೨೫೦ ಜನಸಂಖ್ಯೆಯಿದೆ. ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿರುವ ಗ್ರಾಮಸ್ಥರಲ್ಲಿ ಸಹಕಾರ ಮನೋಭಾವ ವಿದ್ದು, ಕೋವಿಡ್ ಮುಂಜಾಗ್ರತೆ ಕ್ರಮದ ಪಾಲನೆ ಮಾಡುತ್ತಿದ್ದಾರೆ.

ಗ್ರಾಮಸ್ಥರು ಮಾಸ್ಕ್ ಧರಿಸಿ ಕೆಲಸಕ್ಕೆ ಹೋಗುತ್ತಾರೆ. ಅನಗತ್ಯ ತಿರುಗಾಟವಿಲ್ಲ. ಸಂಜೆ ಮನೆಗೆ ಹಿಂದಿರುಗಿದ ತಕ್ಷಣ ಬಿಸಿನೀರು ಸ್ನಾನ ಮಾಡುವ, ಬಿಸಿ ಆಹಾರ ಸೇವಿಸುವ ಕ್ರಮ ಅನುಸರಿಸುತ್ತಿದ್ದಾರೆ. ಶುಚಿತ್ವಕ್ಕೆ ಮಹತ್ವ ನೀಡುತ್ತಿರುವುದರಿಂದ ಗ್ರಾಮಗಳಲ್ಲಿ ಸೋಂಕು ಹರಡುತ್ತಿಲ್ಲ ಎನ್ನುತ್ತಾರೆ ತೇಜಾವತಿ ಮತ್ತು ಇತರ ಆಶಾಕಾರ್ಯಕರ್ತರು.

ಕೊಡ್ಲಿಪೇಟೆ ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ೧೫ ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಸೋಂಕಿತರೂ ಅಧಿಕ ಸಂಖ್ಯೆ ಯಲ್ಲಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಕೊಡ್ಲಿಪೇಟೆ, ಬ್ಯಾಡಗೊಟ್ಟ ಹಾಗೂ ಬೆಸೂರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ ಗಳು, ಸಿಬ್ಬಂದಿ, ವಾರಿಯರ್ಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಲಾಕ್‌ಡೌನ್ ನಿಯಮ ಪಾಲಿಸುತ್ತಾ ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿಯ ಕಟ್ಟುನಿಟ್ಟಿನ ಕ್ರಮ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಪಾಲನೆ ಹಾಗೂ ಗ್ರಾಮಸ್ಥರು ಸರಕಾರದ ಮಾರ್ಗಸೂಚಿ ಪಾಲಿಸುತ್ತಿರುವುದರಿಂದ ೬ ಗ್ರಾಮಗಳು ಕೋವಿಡ್ ಮುಕ್ತವಾಗಿರುವುದು ಹೆಮ್ಮೆಪಡುವ ವಿಷಯ ಎನ್ನುತ್ತಾರೆ ಬೆಸೂರು ಗ್ರಾಮ ಪಂಚಾಯಿತಿ ಪಿಡಿಓ ಎಸ್.ಸಿ. ಸುರೇಶ್.