ಸೋಮವಾರಪೇಟೆ, ಮೇ ೨೪: ಜಿಲ್ಲೆಯ ಸೋಮವಾರಪೇಟೆ ಮತ್ತು ಶನಿವಾರಸಂತೆಯ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಸದ್ಯದಲ್ಲಿಯೇ ಈ ಎರಡೂ ಠಾಣೆಗಳಿಗೆ ಪೊಲೀಸ್ ಇನ್ಸ್ಪೆಕ್ಟರ್‌ಗಳ ನೇಮಕವಾಗಲಿದೆ.
ಸೋಮವಾರಪೇಟೆ ಪೊಲೀಸ್ ವೃತ್ತದ ವ್ಯಾಪ್ತಿಗೆ ಸೋಮವಾರಪೇಟೆ ಪಟ್ಟಣದ ಠಾಣೆ, ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಮಾದಾಪುರ ಮತ್ತು ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಗಳು ಒಳಗೊಂಡಿವೆ.
ಗುಡ್ಡಗಾಡು ಪ್ರದೇಶಗಳನ್ನೇ ಹೊಂದಿರುವ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ೫೨ ಗ್ರಾಮಗಳು ಒಳಪಡಲಿದ್ದು, ಇದರಲ್ಲಿ ಮಾದಾಪುರ ಪೊಲೀಸ್ ಉಪ ಠಾಣೆಯೂ ಒಳಗೊಂಡಿದೆ.
ಸೋಮವಾರಪೇಟೆ ಠಾಣೆಗೆ ಸರ್ಕಾರ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ೨, ಅಪರಾಧ ವಿಭಾಗಕ್ಕೆ ೨ ಠಾಣಾಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದು, ಸದ್ಯ ಕಾನೂನು ಸುವ್ಯವಸ್ಥೆಗೆ ೧ ಹಾಗೂ ಅಪರಾಧ ವಿಭಾಗಕ್ಕೆ ೧ ಠಾಣಾಧಿಕಾರಿಗಳಿದ್ದಾರೆ. ಎರಡೂ ವಿಭಾಗದಲ್ಲಿ ಒಂದೊAದು ಠಾಣಾಧಿಕಾರಿ ಹುದ್ದೆಗಳು ಖಾಲಿಯಿವೆ.
ಇದರೊಂದಿಗೆ ೫ ಎಎಸ್‌ಐ ಹುದ್ದೆ ಇದ್ದು ೫ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೧೧ ಮುಖ್ಯಪೇದೆ ಹುದ್ದೆಗಳು ಭರ್ತಿಯಾಗಿದೆ. ಇಲಾಖೆಯ ಕೆಲಸ ಕಾರ್ಯಗಳನ್ನು ಸುಗಮಗೊಳಿಸಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅತೀ ಅಗತ್ಯವಾಗಿರುವ ಪೊಲೀಸ್ ಪೇದೆಗಳ ಕೊರತೆಯನ್ನು ಸೋಮವಾರಪೇಟೆ ಠಾಣೆ ಎದುರಿಸುತ್ತಿದೆ.
ಸೋಮವಾರಪೇಟೆಗೆ ಒಟ್ಟು ೨೧ ಪೊಲೀಸ್ ಸಿಬ್ಬಂದಿಗಳ ನೇಮಕವಾಗಬೇಕಿದ್ದು, ಸದ್ಯ ೧೩ ಮಂದಿ ಇದ್ದಾರೆ. ಇದರಲ್ಲಿ ಕೋರ್ಟ್ ಕೆಲಸ, ಕಚೇರಿ ಕೆಲಸಕ್ಕೆ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಕಾನೂನು ಸುವ್ಯವಸ್ಥೆಗೆ ಸಿಬ್ಬಂದಿಗಳೇ ಇಲ್ಲವಾಗಿದ್ದಾರೆ. ಇರುವ ಸಿಬ್ಬಂದಿಗಳು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ಠಾಣೆಗೆ ಒಳಪಡುವ ಮಾದಾಪುರ ಪೊಲೀಸ್ ಉಪಠಾಣೆಯಲ್ಲಿ ಒಬ್ಬರು ಎಎಸ್‌ಐ, ಈರ್ವರು ಮುಖ್ಯ ಪೇದೆಗಳಿದ್ದು, ೨ ಪೊಲೀಸ್ ಸಿಬ್ಬಂದಿಗಳ ಹುದ್ದೆ ಖಾಲಿಯಿದೆ. ಸದ್ಯ ಸೋಮವಾರಪೇಟೆ ಠಾಣಾಧಿಕಾರಿಯಾಗಿ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದು, ಅಪರಾಧ ವಿಭಾಗದ ಠಾಣಾಧಿಕಾರಿಗಳು ಅನಾರೋಗ್ಯದ ಹಿನ್ನೆಲೆ ರಜೆಯಲ್ಲಿದ್ದಾರೆ.
ಇನ್ನು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ೩೫ ಗ್ರಾಮಗಳು ಒಳಪಡಲಿದ್ದು, ಈರ್ವರು ಎಸ್.ಐ. ಹುದ್ದೆಗಳು ಮಂಜೂರಾಗಿದ್ದರೂ ಸಹ ಓರ್ವರನ್ನು ಮಾತ್ರ ನೇಮಿಸಲಾಗಿದೆ. ಒಂದು ಹುದ್ದೆ ಖಾಲಿಯಿದೆ. ೫ ಎಎಸ್‌ಐ ಹುದ್ದೆಗಳು ಭರ್ತಿಯಾಗಿವೆ. ೧೦ ಮುಖ್ಯಪೇದೆ ಹುದ್ದೆಗಳ ಪೈಕಿ ಎಲ್ಲವೂ ಭರ್ತಿಯಾಗಿವೆ. ಶನಿವಾರಸಂತೆಗೆ ೨೪ ಪೊಲೀಸ್ ಸಿಬ್ಬಂದಿಗಳ ಹುದ್ದೆ ಮಂಜೂರಾಗಿದ್ದು, ೧೯ ಮಂದಿಯ ನೇಮಕವಾಗಿದೆ. ೫ ಹುದ್ದೆಗಳು ಖಾಲಿಯಿವೆ. ಈ ಠಾಣೆಯ ಉಸ್ತುವಾರಿಯಲ್ಲಿ ಕೊಡ್ಲಿಪೇಟೆ ಉಪಠಾಣೆಯಿದ್ದು, ಓರ್ವ ಎಎಸ್‌ಐ, ಓರ್ವ ಮುಖ್ಯಪೇದೆ, ಈರ್ವರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ೧೧ ತಿಂಗಳಿನಿAದ ದೇವರಾಜ್ ಅವರು ಶನಿವಾರಸಂತೆ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಎರಡೂ ಠಾಣೆಗಳು ಒಳಪಡುವ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಓರ್ವ ಸರ್ಕಲ್ ಇನ್ಸ್ಪೆಕ್ಟರ್, ಓರ್ವ ಮುಖ್ಯಪೇದೆ, ಓರ್ವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಗಳ ಕೊರತೆಯನ್ನು ಎದುರಿಸಿಕೊಂಡೇ ಬಂದಿದೆ.
ಇದೀಗ ಸರ್ಕಾರ ಸೋಮವಾರಪೇಟೆ ಮತ್ತು ಶನಿವಾರಸಂತೆ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಿದ್ದು, ಎರಡೂ ಠಾಣೆಗಳಿಗೆ ಇನ್ಸ್ಪೆಕ್ಟರ್‌ಗಳ ನೇಮಕವಾಗಬೇಕಿದೆ. ಓರ್ವ ಇನ್ಸ್ಪೆಕ್ಟರ್ ಅಡಿಯಲ್ಲಿ ೩ ರಿಂದ ೪ ಠಾಣಾಧಿಕಾರಿಗಳು ಇರಲಿದ್ದು, ಎರಡೂ ಠಾಣೆಗಳಿಗೆ ನೂತನವಾಗಿ ಠಾಣಾಧಿಕಾರಿಗಳ ನೇಮಕವಾಗಬೇಕಿದೆ.
ಸದ್ಯ ಸೋಮವಾರಪೇಟೆಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಬಿ.ಜಿ. ಮಹೇಶ್ ಅವರು ಕಳೆದ ೭ ತಿಂಗಳಿನಿAದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಿರುವ ವೃತ್ತನಿರೀಕ್ಷಕರೇ ಸೋಮವಾರಪೇಟೆ ಠಾಣೆಯ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಯಿದ್ದು, ಶನಿವಾರಸಂತೆಗೆ ನೂತನ ಇನ್ಸ್ಪೆಕ್ಟರ್ ನೇಮಕವಾಗಬೇಕಿದೆ.
ರಾಜ್ಯ ಸರ್ಕಾರದಿಂದ ಈ ಬಗ್ಗೆ ಆದೇಶ ಹೊರಬಂದಿದ್ದು, ಅನುಷ್ಠಾನಕ್ಕೆ ಕಾಲಾವಕಾಶ ಬೇಕಿದೆ. ಡಿ.ಜಿ. ಮಟ್ಟದಲ್ಲಿ ಠಾಣೆಗಳಿಗೆ ಅಧಿಕಾರಿಗಳ ನೇಮಕವಾಗಬೇಕಿದೆ. ಮೇಲ್ದರ್ಜೆಗೇರುತ್ತಿರುವ ಎರಡೂ ಠಾಣೆಗಳು ಸಿಬ್ಬಂದಿಗಳ ಕೊರತೆ ಎದುರಿಸುತ್ತಿದ್ದು, ಇನ್ನಾದರೂ ಈ ಕೊರತೆ ನೀಗಬಹುದು. ಕಾನೂನು ಸುವ್ಯವಸ್ಥೆಯ ಹಾದಿ ಸುಗಮವಾಗಬಹುದು ಎಂಬುದು ಇಲಾಖಾಧಿಕಾರಿಗಳ ಅಭಿಪ್ರಾಯವಾಗಿದೆ.
ಎರಡೂ ಠಾಣೆಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಡಿ.ಜಿ. ಕಚೇರಿಯಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಆದೇಶ ಕೈ ಸೇರಿದೊಡನೆ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಡಿವೈಎಸ್‌ಪಿ ಶೈಲೇಂದ್ರ ‘ಶಕ್ತಿ’ಗೆ ತಿಳಿಸಿದ್ದಾರೆ.
ಸೋಮವಾರಪೇಟೆ ಮತ್ತು ಶನಿವಾರಸಂತೆ ಠಾಣೆಗಳಿಗೆ ಪೊಲೀಸ್ ಇನ್ಸ್ಪೆಕ್ಟರ್‌ಗಳ ನೇಮಕವಾದರೆ ಈಗಿರುವ ಪೊಲೀಸ್ ವೃತ್ತನಿರೀಕ್ಷಕ ಹುದ್ದೆ ಇಲ್ಲವಾಗಲಿದೆ. ವೃತ್ತ ನಿರೀಕ್ಷಕರ ಕಚೇರಿಯನ್ನು ಇಲಾಖೆ ಬೇರೆ ಉಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ.
- ವಿಜಯ್ ಹಾನಗಲ್