ಸೋಮವಾರಪೇಟೆ, ಮೇ ೨೪: ಇಲ್ಲಿನ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ (ಯಿಫಾ) ಸಂಸ್ಥೆಯ ವತಿಯಿಂದ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಎರಡು ಆಮ್ಲಜನಕ ಸಾಂದ್ರಕವನ್ನು ಕೊಡುಗೆಯಾಗಿ ನೀಡಲಾಯಿತು.

ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಶ್ರೀನಿಧಿ ಲಿಂಗಪ್ಪ ಅವರ ಕೋರಿಕೆಯ ಮೇರೆ ಅಸೋಸಿಯೇಷನ್‌ನ ಸದಸ್ಯರಾದ ರಕ್ಷಿತ್ ಅವರ ಪ್ರಯತ್ನದ ಫಲವಾಗಿ, ಬೆಂಗಳೂರಿನ ಪ್ರಣವ್ ಫೌಂಡೇಷನ್ ಸಹಭಾಗಿತ್ವದಲ್ಲಿ ಎರಡು ಆಕ್ಸಿಜನ್ ಕಾನ್ಸ್ಟ್ರೇಟರ್‌ಗಳನ್ನು ಸರ್ಕಾರಿ ಆಸ್ಪತ್ರೆಗೆ ಒದಗಿಸಲಾಯಿತು.

ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಆಮ್ಲಜನಕದ ಸಾಂದ್ರಕವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಇಂತಹ ಸಂಘಟನೆಗಳ ಮೂಲಕ ಯುವಕರು ಒಟ್ಟುಗೂಡಿ, ಬಡವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕೋವಿಡ್ ವ್ಯಾಪಕವಾಗಿ ಹರಡುತ್ತಿರು ವುದರಿಂದ ಸೋಂಕಿತರ ಚಿಕಿತ್ಸೆಗೆ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂಬ ಉದ್ದೇಶದಿಂದ ಎರಡು ಲಕ್ಷ ರೂ.ಗಳ ಮೌಲ್ಯದ ಆಮ್ಲಜನಕ ಸಾಂದ್ರಕದ ಪರಿಕರಗಳನ್ನು ನೀಡಲಾಗಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭ ಅಸೋಸಿಯೇಷನ್ ವತಿಯಿಂದ ನಿರ್ಗತಿಕರಿಗೆ ಊಟ, ಬಡವರಿಗೆ ದಿನಸಿ ಕಿಟ್, ಔಷಧಿಗಳನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ರವೀಂದ್ರ, ವೈದ್ಯರಾದ ಸತೀಶ್‌ಕುಮಾರ್, ಬಿಜೆಪಿ ಮುಖಂಡರಾದ ವಿ.ಎಂ.ವಿಜಯ, ಮನುಕುಮಾರ್ ರೈ, ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಅಸೋಸಿಯೇಷನ್‌ನ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್, ಪದಾಧಿಕಾರಿಗಳಾದ ರಕ್ಷಿತ್‌ಗೌಡ, ಡಾ.ರಾಕೇಶ್ ಪಟೇಲ್, ಅಭಿಷೇಕ್ ಗೋವಿಂದಪ್ಪ, ಜೀವನ್, ಆದರ್ಶ್ ತಮ್ಮಯ್ಯ, ಚರಣ್‌ಕಾಂತ್, ಅರುಣ್‌ಕುಮಾರ್, ವಿನಯ್ ಕುಶಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.