ಮಡಿಕೇರಿ, ಮೇ ೨೫ : ಕೊಡಗು ಜಾತ್ಯಾತೀತ ಜನತಾದಳದ ವತಿಯಿಂದ, ಮಡಿಕೇರಿ ನಗರದ ಪತ್ರಕರ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ವಾಣಿ ಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮತ್ತು ಮುಖಂಡರು ಕಿಟ್‌ಗಳನ್ನು ವಿತರಿಸಿದರು. ಈ ಸಂಕಷ್ಟಕರ ಸನ್ನಿವೇಶದಲ್ಲಿ ಎಲ್ಲರೂ ಭಿನ್ನಭೇದ, ಪ್ರತಿಷ್ಠೆಗಳನ್ನು ಬದಿಗೊತ್ತಿ ಸಹಾಯಹಸ್ತ ಚಾಚಬೇಕಿದೆ ಎಂದು ಗಣೇಶ್ ಹೇಳಿದರು.

ಪತ್ರಕರ್ತರು ದಿನವಿಡೀ ಸಮಾಜದಲ್ಲಿ ಬೆರೆಯ ಬೇಕಿರುವುದರಿಂದ, ಎಚ್ಚರ ವಹಿಸಬೇಕಿದೆ. ಜೊತೆಗೆ ಜೀವವನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಸಣ್ಣ ಸಹಾಯ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ವೇಳೆ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಕೌನ್ಸಿಲರ್ ಮುಸ್ತು, ಸುಂಟಿಕೊಪ್ಪ ಪಂಚಾಯಿತಿ ಸದಸ್ಯರಾದ ಜಿನಾಜುದ್ದೀನ್, ಶಬೀರ್ ಎ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಬೂತ್ ಸಮಿತಿ ಅಧ್ಯಕ್ಷ ಗೋಪಿ, ಯುವ ಜೆಡಿಎಸ್ ಅಧ್ಯಕ್ಷ ಮೋನಿಷ್, ರವಿಕಿರಣ್, ಅಜಿತ್ ಕೊಟ್ಟಕೇರಿಯನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಾಮಾಡ ರಮೇಶ್ ಕುಟ್ಟಪ್ಪ ಮತ್ತಿತರರು ಹಾಜರಿದ್ದರು.