ಗೋಣಿಕೊಪ್ಪಲು, ಮೇ ೨೪: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿರುವ ಬೈಪಾಸ್ ರಸ್ತೆಯ ಕೈ ತೋಡುವಿನ ಜಾಗವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಯೋಗಾನಂದ್ ಮುಂದಾಳತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.
ಪೊನ್ನಂಪೇಟೆ ರಸ್ತೆಯಿಂದ ಆರಂಭ ಗೊಂಡ ಸರ್ವೇ ಕಾರ್ಯ ಕೈತೋಡು ಹರಿಯುವ ಜಾಗದವರೆಗೂ ನಡೆಯಿತು. ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ ಸಂದರ್ಭ ಕೈತೋಡುವಿನ ಜಾಗವನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಖಾತರಿಯಾಗಿದೆ.
ನಾಲ್ಕು ಮಂದಿ ಸರ್ವೇಯರ್‌ಗಳು ಕೆಲಸ ನಿರ್ವಹಣೆ ಮಾಡಿದರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಖುದ್ದಾಗಿ ಆಗಮಿಸಿ ಸರ್ವೇ ಕಾರ್ಯ ಪರಿಶೀಲನೆ ನಡೆಸಿದರು. 'ಶಕ್ತಿ' ಕೈತೋಡು ಅಕ್ರಮ ಒತ್ತುವರಿ ಬಗ್ಗೆ ಸಮಗ್ರ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು.
ಸರ್ವೇ ಕಾರ್ಯದಲ್ಲಿ ತಾಲೂಕು ಮುಖ್ಯ ಅಧೀಕ್ಷಕ ಬಾನಂಗಡ ಅರುಣ್, ಸಿಬ್ಬಂದಿಗಳಾದ ಶಿವಾನಂದಾ ರೆಡ್ಡಿ, ಹೇಮಂತ್, ಕಿರಣ್, ರಂಜಿತ್, ರಮೇಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಕಾರ್ಯದರ್ಶಿ ಪ್ರಕಾಶ್, ಸಿಬ್ಬಂದಿಗಳಾದ ರಾಜು, ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
- ಹೆಚ್.ಕೆ.ಜಗದೀಶ್