ಪ್ರಸ್ತುತ ಪರಿಸ್ಥಿತಿಯನ್ನು ಅರಿತು ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕೆಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಖಡಕ್ ಸೂಚನೆ ನೀಡಿದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆಗೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕಾರ್ಯಕ್ಷಮತೆ, ಕರ್ತವ್ಯ ಪ್ರಜ್ಞೆ ಹೆಚ್ಚಾಗಬೇಕು. ಜಾಗೃತಿ ವಹಿಸಬೇಕು. ಕಾರ್ಯವೈಖರಿ ಬದಲಾಗಬೇಕು ಎಂದರು.

ಮೆಡಿಕಲ್ ಕಾಲೇಜಿನ ಡೀನ್, ಅಧೀಕ್ಷಕ ಹಾಗೂ ಆರೋಗ್ಯ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿತ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮೆಡಿಕಲ್ ಕಾಲೇಜು ಮುಖ್ಯಸ್ಥರು ಸಭೆ ನಡೆಸಿ ಚರ್ಚಿಸಿ ಆಗಬೇಕಾದ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ತಮ್ಮನ್ನೆ ಬದಲಿಸಬೇಕಾಗುತ್ತದೆ

ವೈದ್ಯಾಧಿಕಾರಿಗಳು ಪ್ರತಿಷ್ಟೆ ಬದಿಗೊತ್ತಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಕರ್ತವ್ಯ ಪ್ರಜ್ಞೆ ತೋರಬೇಕು. ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು, ಸಾಮಾಜಿಕ ಕಳಕಳಿಯಲ್ಲಿ ಕೆಲಸ ಮಾಡುವಂತೆ ತಿಳಿಸಿದರು. ಆಡಳಿತ ವೈಖರಿ ಬದಲಾಗದಿದ್ದರೆ ತಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಿದ್ದಲ್ಲಿ ನಿಮ್ಮನ್ನೆ ಬದಲಾಯಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸರಕಾರ ಎಲ್ಲಾ ಸವಲತ್ತು ನೀಡಿದರು ಸೋಂಕಿನ ಪ್ರಮಾಣ ಇಳಿಮುಖವಾಗದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಸೋಂಕಿತರಿಗೆ ಬೇಕಾದ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್‌ಗೆ ಪಾಳಿ ಅನುಸಾರ ನಿಯೋಜಿಸಿರುವ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಗೊಂದಲ ಉಂಟಾಗಬಾರದು ಎಂದರು.