ಸಿದ್ದಾಪುರ, ಮೇ ೧೬: ಕಳೆದ ನಾಲ್ಕು ದಿನಗಳ ಹಿಂದೆ ಹಸು ವೊಂದನ್ನು ಅಪಹರಿಸಿ ಹತ್ಯೆಗೈದು ಮಾಂಸವನ್ನು ತೆಗೆದುಕೊಂಡು ಹೋಗಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿಗಳಾದ ನಾಸೀರ್ (೪೩), ಶಕೀರ್ (೨೪) ಹಂಸ (೪೨) ಹಾಗೂ ಮಾಲ್ದಾರೆ ಗ್ರಾಮದ ಕಲ್ಲಳ್ಳ ನಿವಾಸಿ ಕೆ.ಎಸ್. ಆಶೀಶ್ (೨೮) ಬಂಧಿತ ಆರೋಪಿಗಳು.
ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿಯಾಗಿರುವ ಸೇವರ್ ಎಂಬವರಿಗೆ ಸೇರಿದ ಬೆಲೆಬಾಳುವ ಹಸುವನ್ನು ಮೇಯಲು ಮನೆ ಸಮೀಪ ಬಿಟ್ಟಿದ್ದರು. ಈ ಹಸುವನ್ನು ಅಪಹರಿಸಿ ಕಾಫಿ ತೋಟವೊಂದರಲ್ಲಿ ಹತ್ಯೆಗೈದು ಅದರ ತ್ಯಾಜ್ಯ - ಚರ್ಮ ಹಾಗೂ ಕಳೆಬರಹಗಳನ್ನು ದುರುಳರು ತೋಟ ದೊಳಗೆ ಎಸೆದು ಮಾಂಸಗಳನ್ನು ತೆಗೆದುಕೊಂಡು ಹೋಗಿ ಪರಾರಿಯಾಗಿದ್ದರು.
ಹಸುವಿನ ಮಾಲೀಕ ಸೇವರ್ ರವರು ಕಾಣೆಯಾಗಿರುವ ಹಸುವನ್ನು ಹುಡುಕಿಕೊಂಡು ಹೋಗುವ ಸಂದರ್ಭ ಇದೇ ಕಾಫಿ ತೋಟದೊಳಗೆ ಹಸುವಿನ ಕಳೇಬರ ಪತ್ತೆಯಾಗಿತ್ತು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿರುಸಿನ ತನಿಖೆ ಕೈಗೊಂಡರು.
ಆರೋಪಿಗಳನ್ನು ಹುಂಡಿ ಗ್ರಾಮದಲ್ಲಿತಾ. ೧೬ ರಂದು ಬಂಧಿಸಲಾಯಿತುೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಮಹೇಂದ್ರ ಬೋಲೇರೋ ಜೀಪು (ಕೆ.ಎ. ೧೩ ಎಂ. ೪೦೩೫) ಬುಲ್ಲೆಟ್ ಬೈಕ್ (ಕೆ.ಎ. ೧೨ ಕ್ಯೂ. ೧೭೦೪) ಹಾಗೂ ಸ್ಕೂಟಿ (ಕೆ.ಎ. ೪೪ ವೈ. ೧೨೦೦) ಹಾಗೂ ಇದಕ್ಕೆ ಬಳಸಿದ ಆಯುದ್ಧ ಹಗ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಮಡಿಕೇರಿ ವಿಭಾಗದ ಡಿವೈಎಸ್ಪಿ ಬಾರಿಕೆ ದಿನೇಶ್ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪರವರ ನೇತೃತ್ವದಲ್ಲಿ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಸಹಾಯಕ ಠಾಣಾಧಿಕಾರಿ ತಮ್ಮಯ್ಯ, ಮುಖ್ಯ ಪೇದೆಗಳಾದ ಬೆಳ್ಯಪ್ಪ, ರಮೇಶ್, ಸಿಬ್ಬಂದಿಗಳಾದ ವಸಂತಕುಮಾರ್, ಮಲ್ಲಪ್ಪ ಮುಗಶೀರ್, ಲವಕುಮಾರ್, ಚಾಲಕ ಗೋವರ್ಧನ್ ಪಾಲ್ಗೊಂಡಿದ್ದರು. - ವಾಸು