ಗೋಣಿಕೊಪ್ಪಲು, ಮೇ ೧೬: ಕೊರೊನಾ ಎರಡನೇ ಅಲೆಯಿಂದ ಕೊಡಗಿನ ರೈತ ಸಮುದಾಯ ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆ ನಡೆಸಲು ಇದಕ್ಕೆ ಪೂರಕವಾಗಿ ಬೇಕಾದ ಮಾರಾಟದ ವಸ್ತುಗಳು ಅಂಗಡಿಗಳು ತೆರೆಯುತ್ತಿಲ್ಲ,ವಾಹನ ರಿಪೇರಿ ಮಾಡಲು ವರ್ಕ್ ಶಾಪ್ ತೆರೆಯುತ್ತಿಲ್ಲ, ರಿಪೇರಿಗೆ ಬೇಕಾದ ವಾಹನಗಳ ಬಿಡಿಭಾಗಗಳು ಕೂಡ ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕೃಷಿಯೇತರ ಅಂಗಡಿ ಸೇರಿದಂತೆ ವರ್ಕ್ಶಾಪ್, ಬಿಡಿಭಾಗಗಳ ಅಂಗಡಿಗಳು ತೆರೆಯಲು ಅವಕಾಶ ನೀಡುವಂತೆ ರೈತ ಸಂಘದ ಮುಖಂಡರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಗಮನ ಸೆಳೆದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉಸ್ತುವಾರಿ ಸಚಿವರನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ಭೇಟಿ ಮಾಡಿದ ರೈತ ಮುಖಂಡರು ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.ಅಹವಾಲು ಸ್ವೀಕರಿಸಿದ ಸಚಿವರು ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಅವರನ್ನು ಕರೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕು; ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಅಂಗಡಿಗಳನ್ನು ತೆರೆಯಬೇಕು, ವರ್ಕ್ಶಾಪ್ ಓಪನ್ ಆಗಬೇಕು, ಯಾವುದೇ ರೈತನಿಗೆ ಕೃಷಿ ಚಟುವಟಿಕೆ ನಡೆಸಲು ಅಗತ್ಯ ವಸ್ತುಗಳು ಕೈಗೆ ಸಿಗುವಂತೆ ತಕ್ಷಣದಿಂದಲೇ ಕ್ರಮಕೈಗೊಳ್ಳಲು ಸೂಚನೆ ನೀಡಿದರು. ಡಿವೈಎಸ್ಪಿ ಜಯಕುಮಾರ್ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಚಿವರಿಗೆ ಉತ್ತರಿಸಿದರು.

ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಅವರಿಗೆ ಅವಶ್ಯಕತೆ ಇರುವ ವಸ್ತುಗಳು ಸದಾ ಸಿಗುವಂತೆ ನೋಡಿಕೊಳ್ಳಿ ಎಂದು ಸಚಿವರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಭೇಟಿಯ ವೇಳೆ ರೈತ ಸಂಘದ ಮುಖಂಡರಾದ ಆಲೆಮಾಡ ಮಂಜುನಾಥ್, ಕಿಶಮಾಚಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಚಿವರೊಂದಿಗೆ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಮಧು ದೇವಯ್ಯ, ಗಿರೀಶ್ ಗಣಪತಿ, ಕಿಲನ್ ಗಣಪತಿ, ರಾಬಿನ್ ದೇವಯ್ಯ ಮತ್ತಿತರು ಹಾಜರಿದ್ದರು.

-ಹೆಚ್.ಕೆ. ಜಗದೀಶ್