ಕೂಡಿಗೆ, ಮೇ ೧೬: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಸಚಿವರು ಕೋವಿಡ್ ಕೇಂದ್ರದಲ್ಲಿರುವ ವ್ಯವಸ್ಥೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದರು. ಅಲ್ಲದೆ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ನೀಡುವ ಪ್ರತಿಯೊಂದು ವಸ್ತುಗಳ ಪರಿಶೀಲನೆಯನ್ನು ನಡೆಸಿದರು. ನಂತರ ಸೋಂಕಿತ ವ್ಯಕ್ತಿಗಳಿಗೆ ಸಮರ್ಪಕವಾಗಿ ಅವರುಗಳಿಗೆ ಆಹಾರ ಮತ್ತು ಔಷಧಿಯನ್ನು ನಿಯಮಾನುಸಾರವಾಗಿ ಕ್ರಮಬದ್ಧವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಅಧಿಕಾರಿಗಳಿಂದ ಕೋವಿಡ್ ಸೆಂಟರ್‌ನಲ್ಲಿರುವ ಸೋಂಕಿತ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದು, ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೇಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಹೆಚ್ಚುವರಿ ಕೋವಿಡ್ ಸೆಂಟರ್ ಅನ್ನು ಕುಶಾಲನಗರದ ಎರಡು ಕಡೆಗಳಲ್ಲಿ ತೆರೆಯಲಾಗುವುದು. ತಾಲೂಕಿನಲ್ಲಿ ಆಕ್ಸಿಜನ್ ಸೇರಿದಂತೆ ಎಲ್ಲಾ ವ್ಯವಸ್ಥೆಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಲಾಗಿದೆ. ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ನೀಡಲಾಗುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಸಚಿವರಿಗೆ ನೀಡಿದರು. ನಂತರ ಮಾತನಾಡಿದ ಸಚಿವರು, ಮುನ್ನೆಚ್ಚರಿಕೆಯಾಗಿ ಇನ್ನೂ ಎರಡು ಸೆಂಟರ್‌ಗಳನ್ನು ತೆರೆಯಲಾಗುವುದು. ಅಲ್ಲಿಯು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು.

ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣ್ಯ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಇನ್ನಿತರ ಅಧಿಕಾರಿಗಳು ಹಾಜರಿದ್ದರು.