ಕೋವಿಡ್ ಆಸ್ಪತ್ರೆಯಲ್ಲಿನ ಸೋಂಕಿತರ ಮನದಾಳದ ಮಾತು

ಮಡಿಕೇರಿ, ಮೇ ೧೬: ಕೋವಿಡ್-೧೯ ವೈರಸ್ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ., ಅಂತದ್ದರಲ್ಲಿ ಸೋಂಕು ತಗಲಿತೆಂದರೆ ಹೇಗಾಗಬೇಡ..? ಕೆಲವರಿಗಂತೂ ಅರ್ಧ ಜೀವ ಹೋದಂತಾಗುತ್ತದೆ. ಇನ್ನೂ ಕೆಲವರು ಧೈರ್ಯ ತಕೊಂಡು ಗುಣಮುಖರಾದರೆ, ಬಹುತೇಕರು ಪಾಸಿಟಿವ್ ಬರುತ್ತದೆಂಬ ಹೆದರಿಕೆ., ಸಮಾಜಕ್ಕೆ ಅಂಜಿ ಪರೀಕ್ಷೆ ಕೂಡ ಮಾಡಿಸದೆ ತಾವೇ ಔಷಧಿ ತೆಗೆದುಕೊಂಡು ಪರಿಸ್ಥಿತಿ ಉಲ್ಬಣಗೊಂಡ ಬಳಿಕ ಜೀವ ಕಳೆದುಕೊಳ್ಳುತ್ತಿರುವದನ್ನು ಕಾಣುತ್ತಿದ್ದೇವೆ. ಆರೋಗ್ಯದಲ್ಲಿ ಸಣ್ಣ ಏರು ಪೇರಾದರೂ ಪರೀಕ್ಷೆ ಮಾಡಿಸಿಕೊಂಡು ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೇಳುತ್ತಾರೆ. ನಮ್ಮ ಮನೆಯಲ್ಲಿ ಸಿಗುವ ಉಪಚಾರಗಳಿಗಿಂತಲೂ ಹೆಚ್ಚಾಗಿ ಸರಕಾರಿ ಆಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಉಪಚಾರ ಸಿಗುತ್ತಿದ್ದು, ವ್ಯವಸ್ಥೆಯನ್ನು ಅಲ್ಲಗಳೆಯದೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.

ಕೋವಿಡ್ ಸೋಂಕಿತರ ಪಾಲನೆ ಹಾಗೂ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ೨೫೦ ಹಾಸಿಗೆಗಳ ಸೌಲಭ್ಯಗಳುಳ್ಳ ಆಸ್ಪತ್ರೆಯಲ್ಲಿ ಪ್ರಾಣವಾಯು ಸೌಕರ್ಯ ಕೂಡಾ ಇದೆ. ಈ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಯಾವದೇ ರೀತಿಯ ಸಮಸ್ಯೆಗಳಿಲ್ಲ, ಎಲ್ಲವೂ ವ್ಯವಸ್ಥಿತವಾಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಮನೆಯಲ್ಲೂ ಸಿಗುವದಿಲ್ಲ

ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಶಾಲನಗರದ ಹೊಟೇಲ್ ಉದ್ಯಮಿ ದಾವೂದ್ ಜ್ವರ ಹಾಗೂ ಎದೆನೋವು ಕಾಣಿಸಿಕೊಂಡಾಗ ಖಾಸಗಿ ವೈದ್ಯರ ಬಳಿ ಔಷಧಿ ಪಡೆಯಲು ಮುಂದಾಗಿದ್ದಾಗ ವೈದ್ಯರ ಸಲಹೆಯಂತೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಈ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ತನ್ನ ಜೀವ ಉಳಿಯಿತು, ಇಲ್ಲವಾದರೆ ನನ್ನ ಮಕ್ಕಳಿಗೆ ತಂದೆ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಶುಶ್ರೂಷಕಿಯರು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಾರೆ. ಶುಶ್ರೂಷಕಿಯರಂತೂ ೨೪ ಗಂಟೆಗಳ ಕಾಲ ಪಾಳಿಯಲ್ಲಿನ ಕರ್ತವ್ಯದಲ್ಲಿ ತಮ್ಮ ಮನೆಯವರನ್ನು ನೋಡಿಕೊಂಡAತೆ ಪ್ರತಿಯೋರ್ವರನ್ನು ಗಮನಿಸುತ್ತಾರೆ. ಸಿಬ್ಬಂದಿಗಳೂ ಕೂಡ ಆಸ್ಪತ್ರೆಯನ್ನು ಶುಚಿಯಾಗಿ ಇಟ್ಟುಕೊಂಡಿದ್ದು, ಆಸ್ಪತ್ರೆ ಎಂದೇ ಅನಿಸುವದಿಲ್ಲ. ಇಲ್ಲಿರುವ ಎಲ್ಲಾ ಸೋಂಕಿತರು ಒಂದೇ ಮನೆಯವರಂತೆ ಇರುವಂತಹ ವಾತಾವರಣವಿದೆ. ೨೪ ಗಂಟೆಗಳ ಕಾಲ ಬಿಸಿನೀರು, ಬೆಳಿಗ್ಗೆ ಎಚ್ಚರವಾಗುತ್ತಿದ್ದಂತೆ ಹಾಸಿಗೆಗೆ ಬಿಸಿಯಾದ ಕಾಫಿ, ತಿಂಡಿ, ಮಧ್ಯಾಹ್ನ, ರಾತ್ರಿ ರುಚಿಯಾದ ಊಟ, ಸಂಜೆ ಹಣ್ಣು ಹಂಪಲು, ಸೂಪ್ ಹೀಗೇ ಎಲ್ಲವೂ ಸಿಗುತ್ತದೆ. ನಮ್ಮ ಮನೆಯಲ್ಲೂ ಕೂಡ ಇಷ್ಟೊಂದು ಆರೈಕೆ ಸಿಗುತಿರಲಿಲ್ಲವೇನೋ ಎಂದನಿಸುತ್ತದೆ. ಆಸ್ಪತ್ರೆಯ ಹೊರಗಡೆ ಕೂಡ ಸ್ವಯಂ ಸೇವಕರು ಎಲ್ಲ ರೀತಿಯ ನೆರವು ನೀಡುತ್ತಾರೆ. ಯಾರೇ ಆದರೂ ಕೂಡ ಸಣ್ಣ ಜ್ವರ ಬಂದರೂ ಪರೀಕ್ಷಿಸಿ ಆಸ್ಪತ್ರೆಗೆ ಬನ್ನಿ ಎಂದು ಹೇಳುವ ದಾವೂದ್, ನಕರಾತ್ಮಕ ಟೀಕೆ ಮಾಡುವವರು ಒಮ್ಮೆ ಆಸ್ಪತ್ರೆಗೆ ಬಂದು ಪರಿಶೀಲನೆ ಮಾಡಬೇಕು. ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಸೌಲಭ್ಯ ಒದಗಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ಶಾಸಕ ಅಪ್ಪಚ್ಚು ರಂಜನ್ ಅವರ ಸೇವೆ ಕೂಡ ಹೀಗೇಯೇ ಮುಂದುವರಿಯಲಿ ಎಂದು ಆಶಿಸುತ್ತಾರೆ.

ಎಲ್ಲಾ ಚೆನ್ನಾಗಿದೆ

ಈ ಆಸ್ಪತ್ರೆಯಲ್ಲಿ ಏನೂ ತೊಂದರೆಯಿಲ್ಲ, ಎಲ್ಲವೂ ಚೆನ್ನಾಗಿದೆ. ಎಲ್ಲವನ್ನೂ ಸರಿಯಾದ ಸಮಯಕ್ಕೆ ನೀಡುತ್ತಾರೆ. ಆರಾಮಾಗಿಯೇ ಇರಬಹುದು ಎಂದು ಗಾಳಿಬೀಡಿನ ಜಗದೀಶ್ ಹಾಗೂ ತಿತಿಮತಿಯ ಸುಗುಣ ಅವರುಗಳು ಹೇಳುತ್ತಾರೆ.

ಏನೂ ತೊಂದರೆಯಿಲ್ಲ

ಇಲ್ಲಿ ಎಲ್ಲವೂ ಅಚ್ಚು ಕಟ್ಟಾಗಿದೆ. ಆರೋಗ್ಯದಲ್ಲೂ ಬೇಗನೇ ಚೇತರಿಕೆ ಕಾಣುತ್ತಿದೆ. ಊಟದ ವ್ಯವಸ್ಥೆಯೂ ಚೆನ್ನಾಗಿದೆ. ದಾದಿಯರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಸಿದ್ಧಲಿಂಗಪುರದ ಜಗದೀಶ್ ಹೇಳುತ್ತಾರೆ.

ಚೆನ್ನಾಗಿ ನೋಡುತ್ತಾರೆ

ನನಗೆ ಕೆಮ್ಮು ಜಾಸ್ತಿ ಇತ್ತು, ಈಗ ಕಡಿಮೆಯಾಗಿದೆ, ಆಕ್ಸಿಜನ್ ಕೊಟ್ಟಿದ್ದಾರೆ. ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಚೇರಂಬಾಣೆಯ ರತಿ ನುಡಿಯುತ್ತಾರೆ.

ಯಾವದೇ ಟೆನ್ಷನ್ ಬೇಡ

ನನಗೆ ಆಕ್ಸಿಜನ್ ಲೆವೆಲ್ ಕಡಿಮೆ ಯಾಗಿದ್ದು, ಉಸಿರಾಟ ಕಷ್ಟವಾ ಗಿತ್ತು, ಇಲ್ಲಿಗೆ ಬಂದ ಮೇಲೆ ಇದೀಗ ಯಾವದೇ ಟೆನ್ಷನ್ ಇಲ್ಲ, ಇಲ್ಲಿ ಎಲ್ಲರೂ ಧೈರ್ಯ ತುಂಬುತ್ತಾರೆ. ಎಲ್ಲ ವ್ಯವಸ್ಥೆ ಚೆನ್ನಾಗಿದೆ ಎಂದು ನಾಪೋಕ್ಲಿನ ಇಬ್ರಾಹಿಂ ಹೇಳುತ್ತಾರೆ.

ಇವರುಗಳೂ ಸೇರಿದಂತೆ ಇಲ್ಲಿರುವ ಬಹುತೇಕ ಎಲ್ಲ ಸೋಂಕಿತರು ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆರೊಗ್ಯದಲ್ಲಿ ಸಮಸ್ಯೆ ಕಂಡುಬAದರೆ ನೇರವಾಗಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು, ಸಿಬ್ಬಂದಿಗಳೂ ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. -ಸಂತೋಷ್