ಮಡಿಕೇರಿ, ಮೇ ೧೬: ಪಂಚಾಯತ್ ರಾಜ್ ವ್ಯವಸ್ಥೆಯಡಿ ಜನ ಸಾಮಾನ್ಯರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ತಾಲೂಕು ಪಂಚಾಯಿತಿಗಳ ಆಡಳಿತಾವಧಿ ಮುಕ್ತಾಯಗೊಂಡಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರುಗಳನ್ನೊಳಗೊಂಡ ಆಡಳಿತ ಮಂಡಳಿಯ ಐದು ವರ್ಷಗಳ ಕಾಲಾವಧಿ ಕಳೆದ ತಾ. ೧೦ಕ್ಕೆ ಮುಕ್ತಾಯಗೊಂಡಿದ್ದು, ಇದೀಗ ಮುಂದಿನ ಚುನಾವಣೆ ಘೋಷಣೆ ಆಗುವವರೆಗೂ ಸರಕಾರದ ವತಿಯಿಂದ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ತಾಲೂಕು ಪಂಚಾಯ್ತಿಯ ಉಸ್ತುವಾರಿ ಗಳಾಗಿರುತ್ತಾರೆ.
ಕಳೆದ ೨೦೧೬ರಲ್ಲಿ ಚುನಾವಣೆ ನಡೆದ ಬಳಿಕ ಇದುವರೆಗೆ ಇದ್ದಂತಹ ಜಿಲ್ಲೆಯ ಮೂರು ತಾಲೂಕು ಪಂಚಾಯಿತಿಗಳ ಆಡಳಿತಾವಧಿ ಕಳೆದ ೧೦ರಂದು ಮುಕ್ತಾಯ ಗೊಂಡಿದೆ. ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಪಂಚಾಯ್ತಿಗಳ ಆಡಳಿತ ಮಂಡಳಿ ಸದಸ್ಯರುಗಳ ಅವಧಿ ಪೂರ್ಣ ಗೊಂಡಿದ್ದು, ಇದೀಗ ಆಡಳಿತಾಧಿಕಾರಿಗಳು ಉಸ್ತುವಾರಿ ಗಳಾಗಿರುತ್ತಾರೆ. ಒಟ್ಟು ಹತ್ತು ಸದಸ್ಯ ಸ್ಥಾನಗಳನ್ನು ಹೊಂದಿರುವ ಮಡಿಕೇರಿ ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿ ತೆಕ್ಕಡೆ ಶೋಭಾ ಮೋಹನ್ ಅಧಿಕಾರ ನಿರ್ವಹಿಸಿದರು. ಹನ್ನೊಂದು ಸದಸ್ಯ ಸ್ಥಾನವಿರುವ ಸೊಮವಾರಪೇಟೆ ತಾ.ಪಂ.ನಲ್ಲಿ ಪುಷ್ಪಾ ರಾಜೇಶ್ ಹಾಗೂ ಹನ್ನೊಂದು ಸ್ಥಾನಗಳನ್ನು ಹೊಂದಿರುವ ವೀರಾಜಪೇಟೆ ತಾ.ಪಂ. ಅಧ್ಯಕ್ಷರಾಗಿ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷರುಗಳಾಗಿ ಅಧಿಕಾರ ನಿರ್ವಹಿಸಿದರು. ಇದೀಗ ಈ ಆಡಳಿತ ಮಂಡಳಿಯವರ ಅಧಿಕಾರಾವಧಿ ಪೂರ್ಣಗೊಂಡಿದೆ.
ಆಡಳಿತಾಧಿಕಾರಿಗಳ ನೇಮಕ
ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರಕಾರ ಮೂರು ತಾಲೂಕುಗಳಿಗೆ ಆಡಳಿತಾಧಿಕಾರಿ ಗಳನ್ನು ನೇಮಕ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಶ್ರೇಣಿಯ ಅಧಿಕಾರಿ ಗಳನ್ನೇ ಆಡಳಿತಾಧಿಕಾರಿ ಗಳನ್ನಾಗಿ ನೇಮಕ ಮಾಡ ಬೇಕಾಗಿದ್ದು, ಮಡಿಕೇರಿ ತಾಲೂಕು ಪಂಚಾಯ್ತಿಗೆ ಕೃಷಿ ಇಲಾಖಾ ಉಪನಿರ್ದೇಶಕಿ ಶಬಾನಾ ಶೇಖ್, ವೀರಾಜಪೇಟೆ ತಾಲೂಕು ಪಂಚಾಯ್ತಿಗೆ ಜಿಲ್ಲಾ ಉಪ ಕಾರ್ಯದರ್ಶಿ ಲಕ್ಷಿö್ಮ ಚಂದ್ರಶೇಖರ್ ಹಾಗೂ ಸೋಮವಾರಪೇಟೆ ತಾಲೂಕಿಗೆ ಸಾಮಾಜಿಕ ಅರಣ್ಯ ಇಲಾಖಾ ಉಪ ಸಂರಕ್ಷಣಾಧಿಕಾರಿ ಕಾರ್ಯಪ್ಪ ಅವರುಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಈ ಅಧಿಕಾರಿಗಳು ಅಧಿಕಾರ ವಹಿಸಿ ಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆ, ಬೇಡಿಕೆ, ಅಹವಾಲುಗಳಿದ್ದಲ್ಲಿ ಈ ಅಧಿಕಾರಿಗಳನ್ನು ಸಂಪರ್ಕಿಸ ಬಹುದಾಗಿದೆ.
ಮೀಸಲಾತಿ ಪ್ರಕಟ: ತಾಲೂಕು ಪಂಚಾಯಿತಿಗಳ ಅವಧಿ ಪೂರ್ಣಗೊಳ್ಳುತ್ತಿರುವಂತೆಯೇ ಮುಂದಿನ ಚುನಾವಣೆ ಸಂಬAಧ ಚುನಾವಣಾ ಆಯೋಗ ಸದಸ್ಯ ಸ್ಥಾನಕ್ಕೆ ಮೀಸಲಾತಿ ಘೋಷಣೆ ಮಾಡಿದೆ. ಕಳೆದ ಏ. ೩೦ರಂದೇ ಮೀಸಲಾತಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಮಡಿಕೇರಿ ತಾಲೂಕಿನ ೧೦ ಕ್ಷೇತ್ರಗಳಲ್ಲಿ ೫ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅನುಸೂಚಿತ ಜಾತಿಗೆ ಮಹಿಳೆ, ಪಂಗಡಕ್ಕೆ ಮಹಿಳೆ, ಹಿಂದುಳಿದ ವರ್ಗ ಎ ಎರಡು ಮಹಿಳೆ, ಹಿಂದುಳಿದ ಬಿ ಪುರುಷ ಹಾಗೂ ಸಾಮಾನ್ಯ ಸ್ಥಾನ ೪ ಪುರುಷ ಹಾಗೂ ೧ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ.
ಸೋಮವಾರಪೇಟೆ ತಾಲೂಕಿನ ೧೧ಸ್ಥಾನಗಳಲ್ಲಿ ಆರು ಸ್ಥಾನ ಮಹಿಳೆಗೆ ಮೀಸಲಾಗಿದೆ. ಅನುಸೂಚಿತ ಜಾತಿ ತಲಾ ಓರ್ವ ಪುರುಷ ಹಾಗೂ ಮಹಿಳೆ, ಪಂಗಡ ಒಂದು ಸ್ಥಾನ ಮಹಿಳೆಗೆ, ಹಿಂದುಳಿದ ವರ್ಗ ಎ ಓರ್ವ ಪುರುಷ, ಒಂದು ಮಹಿಳೆಗೆ, ಹಾಗೂ ಸಾಮಾನ್ಯ ಸ್ಥಾನ ತಲಾ ಮೂವರು ಪುರುಷರು ಹಾಗೂ ಮಹಿಳೆಯರಿಗೆ ಮೀಸಲಾಗಿದೆ. ವೀರಾಜಪೇಟೆ ತಾಲೂಕಿನ ಹನ್ನೊಂದು ಸ್ಥಾನಗಳ ಪೈಕಿ ಆರು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ ತಲಾ ಓರ್ವ ಪುರುಷ ಹಾಗೂ ಮಹಿಳೆ, ಪಂಗಡಕ್ಕೆ ಓರ್ವ ಮಹಿಳೆ, ಹಿಂದುಳಿದ ವರ್ಗ ಎ ತಲಾ ಓರ್ವ ಪುರುಷ ಹಾಗೂ ಮಹಿಳೆ, ಸಾಮಾನ್ಯ ಸ್ಥಾನ ತಲಾ ಮೂವರು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ.
ಇನ್ನುಳಿದ ಹೊಸ ತಾಲೂಕುಗಳಿಗೂ ಮೀಸಲಾತಿ ಪ್ರಕಟಗೊಂಡಿದೆ. ಕುಶಾಲನಗರ ತಾಲೂಕಿನ ಹನ್ನೊಂದು ಸ್ಥಾನಗಳ ಪೈಕಿ ಆರು ಸ್ಥಾನ ಮಹಿಳೆಗೆ ಮೀಸಲಾಗಿದೆ. ಅನುಸೂಚಿತ ಜಾತಿ ತಲಾ ಓರ್ವ ಪುರುಷ ಹಾಗೂ ಮಹಿಳೆಗೆ, ಪಂಗಡ ಓರ್ವ ಮಹಿಳೆಗೆ, ಹಿಂದುಳಿದ ವರ್ಗ ಎ ತಲಾ ಓರ್ವ ಪುರುಷ ಹಾಗೂ ಮಹಿಳೆ, ಸಾಮಾನ್ಯ ಸ್ಥಾನ ತಲಾ ಮೂವರು ಪುರುಷರು ಹಾಗೂ ಮಹಿಳೆಯರಿಗೆ ಮೀಸಲಾಗಿದೆ.
ಪೊನ್ನಂಪೇಟೆಯ ಒಂಭತ್ತು ಸ್ಥಾನಗಳ ಪೈಕಿ ಐದು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ ಓರ್ವ ಮಹಿಳೆಗೆ, ಪಂಗಡ ತಲಾ ಓರ್ವ ಪುರುಷ ಹಾಗೂ ಮಹಿಳೆಗೆ, ಹಿಂದುಳಿದ ವರ್ಗ ಎ ತಲಾ ಓರ್ವ ಪುರುಷ ಹಾಗೂ ಮಹಿಳೆ, ಸಾಮಾನ್ಯ ಸ್ಥಾನ ತಲಾ ಮೂವರು ಪುರುಷರು ಹಾಗೂ ಮಹಿಳೆಯರಿಗೆ ಮೀಸಲಾಗಿದೆ.
-ಕುಡೆಕಲ್ ಸಂತೋಷ್