ಸಿದ್ದಾಪುರದಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ವಾಹನಗಳಿಲ್ಲದೆ ಪರದಾಡುವಂತಾಗಿತ್ತು.

ರಂಜಾನ್ ಹಿನ್ನೆಲೆ ಸಾಮಗ್ರಿ ಖರೀದಿಸಲು ಮುಸ್ಲಿಂ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೊಸಬಟ್ಟೆ, ಚಪ್ಪಲಿ ಖರೀದಿಸಲು ಬಂದವರಿಗೆ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳು ಮುಚ್ಚಿದ್ದ ಕಾರಣ ನಿರಾಸೆ ಉಂಟಾಯಿತು. ಬಸ್ ನಿಲ್ದಾಣದ ಸುತ್ತಲು ತರಕಾರಿ, ಹಣ್ಣು - ಹಂಪಲು ವ್ಯಾಪಾರ ಭರ್ಜರಿಯಾಗಿ ನಡೆಯಿತು. ಕೆಲವರಿಗೆ ಜಿಲ್ಲಾಡಳಿತ ದಿನ ಬದಲು ಮಾಡಿದ ವಿಚಾರ ತಿಳಿಯದೇ ಗೊಂದಲಕ್ಕೆ ಸಿಲುಕಿಕೊಂಡಿದ್ದರು. ಇನ್ನೂ ಕೆಲವು ವರ್ತಕರಿಗೆ ವಿಚಾರ ತಿಳಿಯದೇ ಅಂಗಡಿಗಳಿಗೆ ಬೇಕಾದ ಅಗತ್ಯ ವಸ್ತು ದಾಸ್ತಾನು ಇಟ್ಟುಕೊಳ್ಳದೇ ಪರದಾಡುವಂತಾಗಿತ್ತು. ಸಿದ್ದಾಪುರ ಠಾಣಾಧಿಕಾರಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿದ್ದಾಪುರ ಗ್ರಾ.ಪಂ. ವತಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲು ಧ್ವನಿವರ್ಧಕದಲ್ಲಿ ಪ್ರಚಾರ ಮಾಡಲಾಯಿತು.