ವೀರಾಜಪೇಟೆ, ಮೇ 10: ಬೀದಿ ಬದಿ ವ್ಯಾಪಾರಿಗಳಿಗೆ ಕೊರೊನಾ ಲಾಕ್‍ಡೌನ್ ಅಕ್ಷರಶಃ ಕಾರ್ಮೋಡದಂತೆ ಆವರಿಸಿದ್ದು, ಜೀವನ ನಡೆಸುವುದೇ ಕಷ್ಟಕರವಾಗಿದೆ. ಪಟ್ಟಣದಲ್ಲಿ ನೂರಾರು ಮಂದಿ ಬೀದಿ ಬದಿಯಲ್ಲಿ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ ಒಂದೆಡೆ ಕೊರೊನಾ ಅಬ್ಬರ, ಮತ್ತೊಂದೆಡೆ ವ್ಯಾಪಾರ ಇಲ್ಲ. ಜೀವನ ಸಾಗಿಸಲು ಸಂಕಷ್ಟಗಳನ್ನು ಎದುರಿಸುತ್ತ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿವೆ. ಆದರೆ ಕೊರೊನಾ ಅಲೆಯಿಂದ ಬೆಚ್ಚಿ ಬಿದ್ದಿರುವ ಸಾರ್ವಜನಿಕರು ಮನೆಯಿಂದ ಆಚೆ ಬರುತ್ತಿಲ್ಲ. ಹಣ್ಣು, ತರಕಾರಿಗಳು ಕೆಡುತ್ತಿದ್ದು, ಬೀದಿ ಬದಿ ವ್ಯಾಪಾರಿ ಗಳು ಕಂಗಾಲಾಗಿ ಕೊರೊನಾ ಎರಡನೇ ಅಲೆ ಅವರ ಬದುಕಿಗೆ ದೊಡ್ಡ ಹೊಡೆತ ಕೊಟ್ಟಿದೆ. ಇವರಿಗೆ ಕೊರೊನಾ ಕಾರ್ಮೋಡ ಸರಿಯುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ರಾಜ್ಯದಲ್ಲಿ ಗೃಹ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಸೇರಿದಂತೆ 3 ಕೋಟಿಗೂ ಹೆಚ್ಚು ಕಾರ್ಮಿಕರಿದ್ದಾರೆ. ಪ್ರತಿದಿನ ಮಾರುಕಟ್ಟೆ ವಲಯ, ಪ್ರಮುಖ ರಸ್ತೆಗಳ ಬದಿ, ಮನೆಯ ಬಳಿ ಹೂವು, ಹಣ್ಣು, ಸೊಪ್ಪು ಮಾರಾಟ ಮಾಡುತ್ತಿದ್ದವರು, ರಸ್ತೆಗಳಲ್ಲಿ ಪೆನ್ನು, ಪೆನ್ಸಿಲ್, ಗಾಗಲ್ಸ್, ಮಕ್ಕಳ ಆಟಿಕೆಗಳ ವ್ಯಾಪಾರಿಗಳು, ಚಿಕ್ಕಪುಟ್ಟ ಮನೆ ಬಳಕೆ ವಸ್ತುಗಳ ಮಾರಾಟ ವ್ಯಾಪಾರಿಗಳು, ಹಮಾಲಿಗಳು, ಆಟೋ-ಟ್ಯಾಕ್ಸಿ ಚಾಲಕರು, ತಳ್ಳುಗಾಡಿ ವ್ಯಾಪಾರಿಗಳು, ಇತರೆ ಕೂಲಿ ಕಾರ್ಮಿಕರು, ಕಟ್ಟಡ ಹಾಗೂ ಇತರೆ ನಿರ್ಮಾಣ ವಲಯದ ಕಾರ್ಮಿಕರು ಸೇರಿದಂತೆ ಬಹುತೇಕ ಅಸಂಘಟಿತ ಕಾರ್ಮಿಕರ ಸ್ಥಿತಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕ್ಷೇತ್ರಗಳೂ ನಷ್ಟದಲ್ಲಿ ನಡೆಯುತ್ತಿರುವುದರಿಂದ ಕಾರ್ಮಿಕರಿಗೆ ಸಾಲ ನೀಡುವವರ ಸಂಖ್ಯೆಯೂ ಕಡಿಮೆಯಾಗಿದೆ.

ನಿತ್ಯ ಸಂಜೆ ಆದ್ರೆ ಸಾಕು ಆಹಾರ ಪ್ರಿಯರಿಗೆ ಮಿರ್ಚಿ ಬಜ್ಜಿ, ವಡೆ, ಎಗ್‍ರೈಸ್, ಪಾನಿಪುರಿ, ವಡಾಪಾವ್, ಬನ್‍ಮಿರ್ಚಿ, ಗೋಬಿ ಮಂಚೂರಿ, ಸೇರಿದಂತೆ ಅನೇಕ ಖಾದ್ಯಗಳನ್ನು ಉಣಬಡಿಸುತ್ತಿದ್ದವರ ಗೋಳು ಕೇಳುವವರಿಲ್ಲದಂತಾಗಿದೆ. ಸಂಜೆಯಾಗುತ್ತಿದ್ದಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಬೀದಿಬದಿಯ ವ್ಯಾಪಾರಿಗಳು ಕನಿಷ್ಟ 2 ರಿಂದ 3 ಸಾವಿರ ರೂಪಾಯಿ ವಹಿವಾಟು ನಡೆಸುತ್ತಿದ್ದರು. ಅದರಿಂದ ಬರುವ ಲಾಭದಲ್ಲಿ ಅವರ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದೀಗ ಬಹುತೇಕರು ಮಾಡಲು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.