ಅತೀ ಅಗತ್ಯವಲ್ಲದ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನೂತನ ಲಾಕ್ಡೌನ್ ನೀತಿಯನ್ನು ರಾಜ್ಯ ಸರ್ಕಾರ ಹೊರಡಿಸಿದ್ದರೂ ಸೋಮವಾರಪೇಟೆಯಲ್ಲಿ ಇದಕ್ಕೆ ಮನ್ನಣೆ ಸಿಗಲಿಲ್ಲ. ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗದಿಂದಲೂ ಸಾರ್ವಜನಿಕರು ವಾಹನಗಳಲ್ಲಿ ಪಟ್ಟಣಕ್ಕೆ ಆಗಮಿಸಿದ್ದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಆ ಮೂಲಕ ರಾಜ್ಯ ಸರ್ಕಾರದ ಆದೇಶ ಸೋಮವಾರಪೇಟೆಯಲ್ಲಿ ಕಿಂಚಿತ್ತೂ ಪಾಲನೆಯಾಗಲಿಲ್ಲ.
ಮೆಡಿಕಲ್ ಎದುರು ಕರಗದ ಜನ: ಒಂದೆಡೆ ಕೊರೊನಾ ಸೋಂಕು ಸುನಾಮಿಯಂತೆ ಅಪ್ಪಳಿಸುತ್ತಿದ್ದು, ಗಂಭೀರ ಪರಿಣಾಮ ಎದುರಿಸುತ್ತಿರುವ ಮಂದಿ ಮಾತ್ರ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಗಾಗುತ್ತಿದ್ದು, ಕೋವಿಡ್ ಕೇರ್ ಸೆಂಟರ್ ಹಾಗೂ ಹೋಂ ಐಸೋಲೇಷನ್ನಲ್ಲಿದ್ದಾರೆ.
ಕೊರೊನಾ ಸೋಂಕು ಲಕ್ಷಣ ಇರುವ ಬಹುತೇಕ ಮಂದಿ ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಜ್ವರ ಶೀತ, ಕೆಮ್ಮು, ತಲೆ ನೋವಿಗೆ ಮಾತ್ರೆ ಖರೀದಿಸುತ್ತಿದ್ದಾರೆ. ಮೆಡಿಕಲ್ಗಳಲ್ಲೂ ರೋಗಿಗಳು ಹಾಗೂ ಸಂಬಂಧಿಕರ ಸಾಲು ಕರಗುತ್ತಿಲ್ಲ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಮೆಡಿಕಲ್ಗಳಲ್ಲಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವೆನಿಸಿದೆ.
ಬೆಳಿಗ್ಗೆಯಿಂದ ಗಿಜಿಗಿಡುತ್ತಿದ್ದ ಪಟ್ಟಣ ಮಧ್ಯಾಹ್ನದ ವೇಳೆಗೆ ಸಂಪೂರ್ಣ ಸ್ತಬ್ಧಗೊಂಡಿತು. 12 ಗಂಟೆಯಾಗುತ್ತಲೇ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಎಎಸ್ಐ ಖತೀಜ ಸೇರಿದಂತೆ ಸಿಬ್ಬಂದಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. ಆರ್ಎಂಸಿ ಮಾರುಕಟ್ಟೆಯಲ್ಲಿದ್ದ ಸಂತೆಯನ್ನು ತೆರವುಗೊಳಿಸಿದರು.