ಸಾಮಾಜಿಕ ಅಂತರ ಮಾಯ-ಸಾಮಾಗ್ರಿಗಳಿಗೆ ಮುಗಿಬಿದ್ದ ಮಂದಿ

ಸೋಮವಾರಪೇಟೆ,ಮೇ.10: ಸಾಲು ಸಾಲು ಸಾವು ನೋವು, ಸಾವಿರಾರು ಮಂದಿಗೆ ಸೋಂಕು, ಎಲ್ಲಾ ಗ್ರಾ.ಪಂ.ಗಳಿಗೂ ಹಬ್ಬಿರುವ ಕೊರೊನಾದ ಬಗ್ಗೆ ಕಿಂಚಿತ್ತೂ ಭಯವಿಲ್ಲದಂತೆ ವರ್ತಿಸುತ್ತಿರುವ ಮಂದಿಯನ್ನು ಪೊಲೀಸರು ಮಾತ್ರವಲ್ಲ; ಗೃಹ ರಕ್ಷಕದಳದ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಸೋಮವಾರಪೇಟೆಯಲ್ಲಿ ಸರಿದಾರಿಗೆ ತರುವಲ್ಲಿ ಯಶ ಕಾಣುತ್ತಿಲ್ಲ.

ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್‍ನ ಸಿಬ್ಬಂದಿಗಳಿದ್ದರೂ ಕೊರೊನಾಕ್ಕೆ ಕೆಂಪು ಹಾಸು ಹಾಕಿದ ಜನತೆ ಸಾಮಾಜಿಕ ಅಂತರವನ್ನು ಮರೆತು ತರಕಾರಿ, ದಿನಸಿ ಸಾಮಗ್ರಿಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು.

ಒಂದೇ ಒಂದು ಸಮಾಧಾನದ ವಿಷಯವೆಂದರೆ ಬಹುತೇಕ ಮಂದಿ ಮೂಗು-ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಿದ್ದರು. ಇದನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ನೀಡಿದ ಕೋವಿಡ್ ಮಾರ್ಗಸೂಚಿ ಪಟ್ಟಣದಲ್ಲಿ ಪಾಲನೆಯಾದಂತೆ ಕಂಡುಬರಲಿಲ್ಲ.

ಜಿಲ್ಲಾಧಿಕಾರಿಗಳು ಸೋಮವಾರ ಖರೀದಿಗೆ ಅವಕಾಶ ನೀಡಿದ್ದರಿಂದ; ಸೋಮವಾರಪೇಟೆಯಲ್ಲಿ ಸೋಮವಾರ ಸಂತೆ ದಿನವಾದ್ದರಿಂದ ಬಹುತೇಕ ಗ್ರಾಮಗಳಿಂದ ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು.

ಈ ನಡುವೆ ಅಗತ್ಯ ವಸ್ತುಗಳ ಮಾರಾಟಕ್ಕೆ ಇಲ್ಲಿನ ಆರ್.ಎಂ.ಸಿ. ಮಾರುಕಟ್ಟೆ ಆವರಣದಲ್ಲಿ ಪ.ಪಂ.ನಿಂದ ಅವಕಾಶ ಕಲ್ಪಿಸಿದ್ದರಿಂದ ಸಂತೆಯನ್ನೂ ಮೀರಿಸುವಂತೆ ಜನಜಾತ್ರೆ ಕಂಡುಬಂತು. ಇದರೊಂದಿಗೆ ಪಟ್ಟಣದಲ್ಲಿರುವ ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲೂ ಜನತೆ ಸಾಲುಗಟ್ಟಿ ನಿಂತಿದ್ದರು.

ಪೊಲೀಸರನ್ನು ಕಂಡಾಗ ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದ ಮಂದಿ ನಂತರ ಕೊರೊನಾಕ್ಕೆ ಸೆಡ್ಡು ಹೊಡೆದು ಅಂಗಡಿಗಳ ಎದುರು ಗುಂಪುಗೂಡುತ್ತಿದ್ದರು. ಕೆಲವರು ಬೆಳಿಗ್ಗೆ 6 ಗಂಟೆಗೆ ಪಟ್ಟಣಕ್ಕೆ ಆಗಮಿಸಿದ್ದರೂ ಮಧ್ಯಾಹ್ನ 12 ಗಂಟೆಯವರೆಗೆ ಪಟ್ಟಣದಲ್ಲಿ ಸುಖಾಸುಮ್ಮನೆ ಅಡ್ಡಾಡಿ 12 ಗಂಟೆಗೆ ಗ್ರಾಮಗಳತ್ತ ತೆರಳಿದರು.