ಮಡಿಕೇರಿ, ಮೇ 10: ಕೊಡಗು ಜಿಲ್ಲಾಡಳಿತ ಚೇಂಬರ್ ಆಫ್ ಕಾಮರ್ಸ್‍ನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ತನಗಿಷ್ಟ ಬಂದಂತೆ ನಿಯಮಗಳನ್ನು ರೂಪಿಸಿ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು ಚೇಂಬರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಗತ್ಯ ವಸ್ತುಗಳ ಖರೀದಿಗೆ ವಾರದ ಎರಡು ದಿನ ಮಾತ್ರ ನಿಗದಿಮಾಡಿರುವುದಲ್ಲದೆ ವಾಹನಗಳ ಓಡಾಟಕ್ಕೂ ನಿರ್ಬಂಧ ಹೇರಿರುವುದರಿಂದ ಇಂದು ಯಾವುದೇ ಅಂಗಡಿಗಳಿಗೆ ವ್ಯಾಪಾರವಾಗಿಲ್ಲ. ಗ್ರಾಹಕರು ಕೂಡ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಇದು ಅವೈಜ್ಞಾನಿಕ ಕ್ರಮವಾಗಿದೆ ಎಂದಿದ್ದಾರೆ.

ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಚೇಂಬರ್ ಆಫ್ ಕಾಮರ್ಸ್‍ನೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳುವುದು ಸಹಜ ಪ್ರಕ್ರಿಯೆ. ಈ ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಇದೇ ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಇದೀಗ ಅಂತಹ ಕ್ರಮ ಅನುಸರಿದ್ದರಿಂದ ಸಮಸ್ಯೆ ಉದ್ಭವಿದೆ ಎಂದಿದ್ದಾರೆ.