ಸಿದ್ದಾಪುರ, ಮೇ 9: ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡು ಬಿಟ್ಟು ದಾಂಧಲೆ ನಡೆಸುತ್ತ ಹಾನಿ ಗೊಳಿಸುತ್ತಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಹಾಡ ಹಗಲೇ ಸುತ್ತುತ್ತಿರುವುದರಿಂದ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಕೆ.ಪಿ. ದೇವಯ್ಯ ಹಾಗೂ ನಡಿಕೇರಿಯಂಡ ವಿಕ್ರಂ ಅಯ್ಯಪ್ಪ ಅವರ ಕಾಫಿ ತೋಟಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆಯೆಂದು ಬೆಳೆಗಾರರು ತಿಳಿಸಿದ್ದಾರೆ. ಶನಿವಾರದಂದು ಕಾಡಾನೆಗಳ ಹಿಂಡು ವಿಕ್ರಂ ಅಯ್ಯಪ್ಪ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸಿದೆÉ. ಮರಿಯಾನೆಗಳೂ ಸೇರಿದಂತೆ 17ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂಧಲೆ

ನಡೆಸಿ ಕಾಫಿ ಗಿಡಗಳನ್ನು ಹಾಗೂ ಇತರ ಮರ ಗಿಡಗಳನ್ನು ಧ್ವಂಸಗೊಳಿಸಿದೆ ಎಂದರು. ವಿಪರೀತ ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಭೀತರಾಗಿದ್ದಾರೆಂದು ವಿಕ್ರಂ ತಿಳಿಸಿದ್ದಾರೆ.

ಕೂಡಲೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ವಾಸು