ಜನದಟ್ಟಣೆ ನಿಯಂತ್ರಿಸಲು ಗ್ರಾಮೀಣ ಪ್ರದೇಶದಲ್ಲಿ ಬ್ಯಾರಿಕೇಡ್
ಮಡಿಕೇರಿ, ಮೇ 9: ನಗರ ಪ್ರವೇಶಿಸುವ ವಾಹನಗಳ ನಿಲುಗಡೆಗೆ ವಿವಿಧೆಡೆ ಜಾಗ ನಿಗದಿಪಡಿಸಿದ್ದು, ಅಲ್ಲಿಯೆ ವಾಹನಗಳನ್ನು ನಿಲ್ಲಿಸಲು ಸಂಬಂಧಪಟ್ಟ ಇಲಾಖೆ ಕ್ರಮಕೈಗೊಂಡಿದೆ.
ಚೆಟ್ಟಳ್ಳಿ, ಮಕ್ಕಂದೂರು, ಸುಂಟಿಕೊಪ್ಪ ರಸ್ತೆಯ ಕಡೆಗಳಿಂದ ಬರುವ ವಾಹನಗಳು ಸುದರ್ಶನ ವೃತ್ತದಿಂದ ಚೈನ್ಗೇಟ್ ಮಾರ್ಗವಾಗಿ ಮ್ಯಾನ್ಸ್ ಕಾಂಪೌಡ್ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬೇಕಾಗಿದೆ. ಅಬ್ಬಿಫಾಲ್ಸ್ ಕಡೆಯಿಂದ ಬರುವ ಎಲ್ಲಾ ವಾಹನಗಳು ಅಬ್ಬಿಫಾಲ್ಸ್ ರಸ್ತೆಯಲ್ಲಿ ಹಾಗೂ ಮುತ್ತಪ್ಪ ದೇವಾಲಯದ ರಸ್ತೆಯ ಎಡ ಬದಿಯಲ್ಲಿ ಹಾಗೂ ಕಾನ್ವೆಂಟ್ ರಸ್ತೆಯ ಮುಖೇನ ಸಾಯಿ ಮೈದಾನವಾಗಿ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಬೇಕು.
ಮದೆನಾಡು ಹಾಗೂ ಹಾಕತ್ತೂರು ಕಡೆಯಿಂದ ಬರುವ ವಾಹನಗಳು ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೆರಿರ ಮುತ್ತಣ್ಣ ವೃತ್ತದ ಮೂಲಕ ಕಾಫಿ ಕೃಪದಿಂದ ರಸ್ತೆಯ ಎಡಭಾಗದಲ್ಲಿ ವೆಬ್ಸ್ ಜಂಕ್ಷನ್ವರಗೆ ವಾಹನ ನಿಲುಗಡೆ ಮಾಡಬೇಕು. ಗಾಳಿಬೀಡು ಹಾಗೂ ಕಾನ್ವೆಂಟ್ ಜಂಕ್ಷನ್ ಸುತ್ತಮುತ್ತ
ಕಡೆಯಿಂದ ಬರುವ ವಾಹನಗಳು ಸಾಯಿ ಮೈದಾನದ ಮೂಲಕ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು.
ಮಡಿಕೇರಿಯಲ್ಲದೆ ಹೊರ ಭಾಗದಿಂದ ಬರುವವರು ಸ್ಥಳೀಯವಾಗಿ ಅಗತ್ಯ ಸಾಮಾಗ್ರಿ ಖರೀದಿಸಲು ಜಿಲ್ಲಾಡಳಿತ ಮನವಿ ಮಾಡಿದ್ದು, ಸಿದ್ದಾಪುರ ಹಾಗೂ ಸುಂಟಿಕೊಪ್ಪ ಕಡೆಯಿಂದ ಬರುವವರನ್ನು ತಡೆಯಲು ಚೆಟ್ಟಳ್ಳಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಜೊತೆಗೆ ಭಾಗಮಂಡಲ, ನಾಪೋಕ್ಲು ಅಥವಾ ಬೆಟ್ಟಗೇರಿ ವ್ಯಾಪ್ತಿಯಿಂದ ಬರುವ ವಾಹನಗಳನ್ನು ತಡೆಯಲು ಬೆಟ್ಟಗೇರಿಯಲ್ಲಿ, ಮಾದಾಪುರ, ಮಕ್ಕಂದೂರು ಜನದಟ್ಟಣೆ ನಿಯಂತ್ರಿಸಲು ಮಕ್ಕಂದೂರಿನಲ್ಲಿ, ಹಾಲೇರಿ, ಕೆದಕಲ್, ಬೋಯಿಕೇರಿ ಕಡೆಯಿಂದ ಬರುವ ವಾಹನ ತಡೆಗೆ ಬೋಯಿಕೇರಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತದೆ.
ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ತೆರಳಿ ಅಗತ್ಯ ವಸ್ತು ಖರೀದಿಸಬೇಕು. ಅನಗತ್ಯವಾಗಿ ಯಾವುದೇ ವಾಹನ ಹಾಗೂ ಸಾರ್ವಜನಿಕರು ಸಂಚರಿಸಿದ್ದಲ್ಲಿ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.