ಮಾನ್ಯರೆ, ಕಳೆದ ಸಾಲಿನ ಕೋವಿಡ್ ಸಂಕಟವನ್ನು ಎದುರಿಸುವುದು ಇರಲಿ, ಈ ಸಾಲಿನ ಕೋವಿಡ್ ಆತಂಕವನ್ನು ಎದುರಿಸುವಲ್ಲಿ ನಾವು ಎಡವಿದ್ದೇವೆಯೇ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಹೌದು ಎಂಬ ಉತ್ತರ ನೀಡಬಹುದು.

ಕಳೆದ ಸಾಲಿನಲ್ಲಿ ಅನುಭವಿಸಿದ ಅಪಾರ ಸಂಕಟಗಳು, ಸಾವು-ನೋವುಗಳು ನಮ್ಮ ಮುಂದೆ ಇದ್ದರೂ ನಾವು ಬುದ್ಧಿ ಕಲಿಯಲಿಲ್ಲ. ಕಳೆದ ಸಾಲಿನಲ್ಲಾದರೆ ಅದು ಮೊದಲ ಅನುಭವ, ಹೊಸದೊಂದು ರೋಗ ವಕ್ಕರಿಸಿ ಜನರನ್ನು ಇನ್ನಿಲ್ಲದಂತೆ ಕಾಡುತ್ತದೆಂದು ಯಾರೂ ಕನಸು ಮನಸ್ಸಿನಲ್ಲಿಯೂ ಊಹಿಸಿರದ ಒಂದು ಪ್ರಸಂಗ. ಎಲ್ಲೋ ಚೀನಾ ದೇಶದ ವುಹಾಂನ್ ಎಂಬಲ್ಲಿ ಅವತರಿಸಿ ಕಾಡ್ಗಿಚ್ಚಿನಂತೆ ಇಡೀ ವಿಶ್ವವನ್ನೇ ಆಪೋಷಣೆಗೈದ ಒಂದು ಮಹಾಮಾರಿಯನ್ನು ವಿಶ್ವದ ಜನತೆ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ.

ಆದರೆ ಇದೀಗ ನಾವು ಕಲಿತ ಪಾಠ ಎಲ್ಲಿ ಹೋಯಿತು? ಪರಿಸ್ಥಿತಿ ಅಲ್ಪಸ್ವಲ್ಪ ಸುಧಾರಿಸಿತು ಎನ್ನುವಾಗ ನಾವು ಹಿಂದಿನಂತೆ ಮೈಮರೆತು ವರ್ತಿಸಿದುದರ ಪ್ರತಿಫಲವನ್ನು ಇದೀಗ ನಾವು ಉಣ್ಣುವಂತೆ ಕಂಡು ಬರುತ್ತಿದೆ. ಕೊರೊನಾ ಎಂಬ ಮಹಾಮಾರಿಯ ರುದ್ರನರ್ತನ ಮತ್ತೊಮ್ಮೆ ದೇಶದಲ್ಲಿ ವ್ಯಾಪಿಸಿದೆ. ಜನಗಳು ಸೂಕ್ತ ಉಪಚಾರದ ವ್ಯವಸ್ಥೆ ಇಲ್ಲದೇ ಸಾಯಲಾರಂಭಿಸಿದ್ದಾರೆ. ಸೂಕ್ತ ಆಸ್ಪತ್ರೆಗಳಿಲ್ಲ, ಅಂತೆಯೇ ಔಷಧಗಳ ಪೂರೈಕೆಯಲ್ಲಿ ಕೊರತೆ, ಜೀವ ರಕ್ಷಕ ಆಕ್ಸಿಜನ್ ಒದಗಿಸುವಲ್ಲಿನ ಕೊರತೆ ಎಂಬುದಾಗಿ ಪಟ್ಟಿಮಾಡುತ್ತಾ ಹೋದರೆ ಎಲ್ಲಿ ನೋಡಿದರಲ್ಲಿ ಇಲ್ಲಗಳು ಮತ್ತು ಕೊರತೆಗಳೇ ಎದ್ದುಕಾಣುತ್ತಲಿವೆ. ‘ಇದ್ದವನ್ನು ಇದ್ದ ಸತ್ತವನು ಸತ್ತ’ ಎಂಬ ಅಯೋಮಯ ಪರಿಸ್ಥಿತಿ ಏರ್ಪಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಇದೇಕೆ ಎಲ್ಲಾ ಹೀಗಾಯಿತು ಎಂದು ಪರಾಮರ್ಶಿಸ ಹೋದರೆ ಪ್ರಜೆಗಳ ಹಾಗೂ ನಮ್ಮನ್ನಾಳುವವರ ದೊಡ್ಡ ತಪ್ಪುಗಳು ಎದ್ದು ಕಾಣಲಾರಂಭಿಸಿವೆ. ಕಳೆದ ಸಾಲಿನಲ್ಲಿ ಏನೋ ಈ ಬಗ್ಗೆ ಅರಿವು ಇಲ್ಲದ್ದರಿಂದ ಎಡವಟ್ಟಾಯಿತು ಎಂದಿಟ್ಟುಕೊಳ್ಳೋಣ. ಆದರೆ ಈ ಬಾರಿ ಎಲ್ಲಾ ಕೆಟ್ಟ ಪರಿಣಾಮಗಳ ಅರಿವು ಇದ್ದೂ ಎಡವಟ್ಟನ್ನು ನಾವೇ ಎದೆಯ ಮೇಲೆ ಎಳೆದುಕೊಂಡಂತೆ ಆಯಿತಲ್ಲಾ? ತಂತ್ರಜ್ಞರು ಹಾಗೂ ನುರಿತ ವಿಜ್ಞಾನಿ, ವೈದ್ಯರುಗಳು ಕೊರೊನಾದ ಎರಡನೇ ಅಲೆ ಅಪ್ಪಳಿಸುತ್ತದೆಂದು ಕಳೆದ ನವೆಂಬರ್ ತಿಂಗಳಿನಲ್ಲಿಯೇ ಎಚ್ಚರಿಸಿದ್ದರೂ ನಾವದನ್ನು ಪರಿಗಣನೆಗೇ ತೆಗೆದುಕೊಳ್ಳಲಿಲ್ಲ! ಅವರ ಎಚ್ಚರಿಕೆಯ ಬಗ್ಗೆ ನಮ್ಮ ಪ್ರಧಾನ ಮಂತ್ರಿಗಳೂ ಉದಾಸೀನವಾಗಿಯೇ ಮಾತನಾಡಿದ್ದರು! ಅಂತೆಯೇ

ನಾವು ಜನಸಾಮಾನ್ಯರೂ ಮೈಮರೆತು ಮೆರೆದಾಡಿದ್ದೇ ಬಂತು. ಮಹಾಮಾರಿಯೊಂದು ಅಪ್ಪಳಿಸಿ ಸ್ವಲ್ಪ ವಿರಾಮ ನೀಡಿದಾಗ ನಾವೆಲ್ಲಾ ಅನುಭವಿಸಿದ ಸಂಕಷ್ಟಗಳನ್ನು ಮರೆತು ಕ್ಷಣಿಕವಾಗಿ ಸುಖಿಸಿದ್ದೇ ಬಂತು.

ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎಂಬಂತೆ ಕೊರೊನಾದ ಪುನರಾವರ್ತನೆ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಲಾರಂಭಿಸಿದೆ. ಇದೆಲ್ಲಾ ನಾವು ಕಳೆದ ಸಂಕಷ್ಟದ ದಿನಗಳನ್ನು ಮರೆತು ಮೈಮರೆತು ವರ್ತಿಸಿಸುದರ ಪ್ರತಿಫಲವಿಲ್ಲದೆ ಬೇರೇನೂ ಅಲ್ಲ.

‘ಕೆಟ್ಟಮೇಲೆ ಬುದ್ಧಿ ಬಂತು’ ಎಂಬ ಹಳೆಯ ಗಾದೆ ಮಾತೊಂದಿದೆ. ಆದರೆ ಕೆಟ್ಟರೂ ಬುದ್ಧಿ ಬರಲಿಲ್ಲವಲ್ಲಾ ಎಂಬುದನ್ನು ಅವಲೋಕಿಸಿದರೆ ನಾವು ಹುಲುಮಾನವರ ಮೊಡ್ಡುತನಕ್ಕೆ ಒಂದಿಷ್ಟು ಬೆಂಕಿ ಹಾಕಲೇ ಬೇಕಲ್ಲಾ? ಇದು ಯಾವ ಪರಿ ಮೈಮರೆವು? ಇದ್ಯಾವ ಪರಿ ನಮ್ಮ ಹಠಮಾರಿತನ? ಹೆಮ್ಮಾರಿ ನಮ್ಮ ಹಿಂದೆಯೇ ಕರಿನೆರಳಿನಂತೆ ಹಿಂಭಾಲಿಸುತ್ತಿದ್ದರೂ ನಾವು ಅರಿಯದೇ ಮೈಮರೆತು ವರ್ತಿಸಿದರ ದುಷ್ಪರಿಣಾಮವನ್ನು ಇಂದು ಎದುರಿಸಬೇಕಾಗಿದೆ.

ಇದೀಗ ಹೆಮ್ಮಾರಿ ನಮ್ಮೆಲ್ಲರ ಮನೆಯ ಕದ ತಟ್ಟಲಾರಂಭಿಸಿದೆ. ನಾವೆಲ್ಲಾ ಒಂದಾಗಿ ಎದುರಿಸಿ ಅದನ್ನು ಹಿಮ್ಮೆಟ್ಟಿಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪೊಲೀಸರ ಕರ್ತವ್ಯ ಅಥವಾ ಸರಕಾರದ ಕರ್ತವ್ಯ ಎಂದು ಉದಾಸೀನತೆಯಿಂದ ವರ್ತಿಸಿ, ಮೈಮರೆತು ನಡೆದರೆ ನಮ್ಮ ಸಾವಿನ ಗುಂಡಿಯನ್ನು ನಾವೇ ತೋಡಿದಂತೆ ಆಗುವುದಂತೂ ನಿಸ್ಸಂಶಯ!

ಸಂಬಂಧಿಸಿದ ಎಲ್ಲಾ ಇಲಾಖೆಯವರೊಡನೆ ಸೂಕ್ತವಾಗಿ ಸ್ಪಂದಿಸಲೇಬೇಕಾಗಿದೆ. ಹೆಮ್ಮಾರಿ ಮತ್ತೊಮ್ಮೆ ಹುಚ್ಚೆದ್ದು ರುದ್ರನರ್ತನಗೈಯ್ಯುವುದರೊಳಗೇ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದು ನಾವೆಲ್ಲಾ ಮಾನವರಾದರೆ ಮಾತ್ರ, ದಾನವರಾಗುವುದರಿಂದ ಖಂಡಿತಾ ಸಾಧ್ಯವಿಲ್ಲ.

ಅದಕ್ಕೆ ಮೊತ್ತೆಮ್ಮೆ ಹೇಳಲಿಚ್ಚಿಸುತ್ತೇನೆ, ನಾವು ಒಮ್ಮೆ ಎಡವಿದ್ದಾಯಿತು ಪದೇ ಪದೇ ಎಡವುವುದು ಬೇಡ. ನಮ್ಮ ಎಚ್ಚರಿಕೆಯಲ್ಲಿ ಮುಂದಕ್ಕಾದರೂ ನಾವೆಲ್ಲಾ ಇರೋಣ. ಕೊರೊನಾದ ದುಷ್ಪರಿಣಾಮಗಳನ್ನು ಎದುರಿಸಲು ಸಂಘಟಿತರಾಗೋಣ. ಆಪತ್ತು ನಮ್ಮ ಮುಂದಿದೆ. ಆಪತ್ತ್‍ಬಾಂಧವರು ಹೇಳಿದಂತೆ ನಡೆಯೋಣ.

- ಎಸ್.ಯಂ. ವಿಶ್ವನಾಥ್, ಮಾಯಮುಡಿ.