ಮಾನ್ಯರೆ, ಇಂದಿನ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ತ ಸಂಬಂಧಿಗಳೇ ಸೋಂಕಿತರೊಂದಿಗೆ ಒಡನಾಟ ಕಳೆದುಕೊಳ್ಳುವ ಆತಂಕದ ಬೆಳವಣಿಗೆ ಕಂಡುಬರುತ್ತಿದೆ. ಆದರೆ ಎಲ್ಲಾ ಸಂಬಂಧಗಳನ್ನು ಮೀರಿದ ಶವ ಸಂಸ್ಕಾರದಂತಹ ಒಂದು ಸತ್ಕಾರ್ಯದಲ್ಲಿ ತೊಡಗಿರುವ ವಿಶ್ವ ಹಿಂದೂ ಪರಿಷತ್‍ನ ಸುರೇಶ್ ಮುತ್ತಪ್ಪ ಹಾಗೂ ಭಜರಂಗದಳದ ಹೆಚ್.ಎಸ್. ಚೇತನ್ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು.

ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಇಂದಿನ ಪರಿಸ್ಥಿತಿಯಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಇವರಿಬ್ಬರು ತಮ್ಮ ತಂಡದೊಂದಿಗೆ ಮಾಡುತ್ತಿರುವ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ. ಅವರವರ ಆಚಾರ, ವಿಚಾರ, ಸಂಸ್ಕೃತಿಗೆ ಲೋಪವಾಗದಂತೆ ಅಂತ್ಯಸಂಸ್ಕಾರ ನೆರವೇರಿಸುವ ಈ ಬಳಗ ಏನನ್ನೂ ಬಯಸುವುದಿಲ್ಲ. ಎಲ್ಲಾ ಖರ್ಚು ವೆಚ್ಚಗಳನ್ನು ಇವರುಗಳೇ ಭರಿಸಿ ಕುಟುಂಬದವರಿಗೆ ಸಾಂತ್ವನ ಹೇಳುವ ದೊಡ್ಡಗುಣ ಹೊಂದಿರುವ ಸುರೇಶ್ ಹಾಗೂ ಚೇತನ್ ಅಭಿನಂದನಾರ್ಹರು. ಇವರಂತೆ ಜನಪ್ರತಿನಿಧಿಗಳು ಎನಿಸಿಕೊಂಡವರು ಕೂಡ ಈ ಸಂಕಷ್ಟದ ಕಾಲದಲ್ಲಿ ಜನಸೇವೆಗೆ ತಮ್ಮ ಸಮಯವನ್ನು ಮೀಸಲಿಟ್ಟರೆ ರಾಜಕೀಯ ಜೀವನ ಸಾರ್ಥಕವಾದಂತೆ.

- ಎಂ.ಡಿ. ನಾಣಯ್ಯ, ಅಧ್ಯಕ್ಷರು, ಕೊಡಗು ಜಿಲ್ಲಾ ಕುಲಾಲ್ (ಕುಂಬಾರರ) ಸಂಘ.