ಗೋಣಿಕೊಪ್ಪಲು, ಮೇ ೬: ಕಿರುಗೂರು ಗ್ರಾಮ ಪಂಚಾಯಿತಿಯ ಹೊನ್ನಿಕೊಪ್ಪ ಕಾಲೋನಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

ದಿನದಿಂದ ದಿನಕ್ಕೆ ಈ ಕಾಲೋನಿಯ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿ ಆಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯನ್ನು ಹತೋಟಿಗೆ ತರಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸ್ಥಳೀಯ ಗ್ರಾಮಸ್ಥರ ಸಲಹೆ ಪಡೆದು ಅಂತಿಮವಾಗಿ ಕಾಲೋನಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲು ಪಂಚಾಯಿತಿಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ.

ಈ ಭಾಗದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜನರ ಗಂಟಲು ದ್ರವ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಕಾಲೋನಿಯಿಂದ ಯಾರು ಕೂಡ ಹೊರ ಹೋಗುವ ಪ್ರಯತ್ನ ಮಾಡದಂತೆ ಜಾಗ್ರತೆ ಮೂಡಿಸಲಾಗಿದೆ.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಈ ಭಾಗದಲ್ಲಿ ಇರುವುದನ್ನು ಮನಗಂಡ ಪಂಚಾಯಿತಿ ಆಡಳಿತ ಮಂಡಳಿಯವರು ಪಂಚಾಯಿತಿ ವತಿಯಿಂದ ಪ್ರತಿ ಮನೆಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲು ಕ್ರಮಕೈಗೊಂಡಿದ್ದಾರೆ.

ಉಳಿದ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ. ಇಂತಹ ಸೋಂಕಿತರ ಮನೆಗಳಿಗೆ ತಮಗೆ ಬೇಕಾದ ಅಂಗಡಿಯಲ್ಲಿ ಅಗತ್ಯ ವಸ್ತುಗಳನ್ನು ಬುಕ್ ಮಾಡಿ ಅವರುಗಳೆ ಹಣ ಸಂದಾಯ ಮಾಡಿದಲ್ಲಿ ವಸ್ತುಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಪಂಚಾಯಿತಿ ಕಡೆಯಿಂದ ಮಾಡಲಾಗುತ್ತದೆ ಎಂದು ಸದಸ್ಯ ಚಪ್ಪುಡೀರ ರಾಕೇಶ್ ಮಾಹಿತಿ ತಿಳಿಸಿದ್ದಾರೆ.