*ವೀರಾಜಪೇಟೆ, ಮೇ ೬: ಉಸ್ತುವಾರಿ ಸಚಿವರಾದ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಇಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆ, ಆರ್ಜಿ ಗ್ರಾಮದ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಆಕ್ಸಿಜನ್ ವ್ಯವಸ್ಥೆ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸಾ ಗುಣಮಟ್ಟವನ್ನು ಖುದ್ದು ವೀಕ್ಷಿಸಿದರು. ತಾಲೂಕು ವೈದ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಯಿಂದ ಮಾಹಿತಿಯನ್ನು ಪಡೆದುಕೊಂಡರು.
ಆರ್ಜಿ ಗ್ರಾಮ ಬಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ವ್ಯವಸ್ಥೆಗಳ ಬಗ್ಗೆ ರೋಗಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಸಚಿವರು ಕೊಡಗು ಜಿಲ್ಲೆಗೆ ಅಗತ್ಯವಿರುವ ವೈದ್ಯರು, ದಾದಿಯರ ನೇಮಕಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ವೀರಾಜಪೇಟೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಈಗ ೫೧ ಆಕ್ಸಿಜನ್ ಬೆಡ್ಗಳು ಇವೆ. ಹೆಚ್ಚುವರಿಯಾಗಿ ೩೧ ಬೆಡ್ಗಳನ್ನು ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಅಂಗಡಿಗಳನ್ನು ತೆರೆಯುವ ನಿರ್ಧಾರ ಸೂಕ್ತವಾದ ಪ್ರತಿಫಲ ನೀಡುವ ನಿರೀಕ್ಷೆ ಇದೆ. ಇದರಿಂದಾಗಿ ಕೆಲ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಬಹುದು ಎಂಬ ಆಶಾಭಾವವನ್ನು ಸಚಿವರು ಈ ಸಂದರ್ಭ ವ್ಯಕ್ತಪಡಿಸಿದರು. ಅಲ್ಲದೇ ವ್ಯಾಕ್ಸೀನ್ ಕೊರತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೆರೆಡು ಮೂರು ದಿನದಲ್ಲಿ ವ್ಯಾಕ್ಸಿನ್ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ. ಸಣ್ಣ-ಪುಟ್ಟ ಲೋಪದೋಷಗಳಿದ್ದಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಒಂದು ‘ಟೀಮ್’ ಮಾದರಿಯಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ನಗರದ ಸ್ವಚ್ಛತೆ, ಸೀಲ್ಡೌನ್ ಮಾಡಿದ ಮನೆಗಳಿಗೆ ಸ್ಯಾನಿಟೈಸ್ ಮಾಡುವ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಪಿಪಿಇ ಕಿಟ್ ನೀಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮನವಿ ಸಲ್ಲಿಸಿದ ಮೇರೆಗೆ ಉಸ್ತುವಾರಿ ಸಚಿವರು ತಾಲೂಕು ವೈದ್ಯಾಧಿಕಾರಿಯವರಿಗೆ ಪೌರಕಾರ್ಮಿಕರಿಗೆ ಅಗತ್ಯವಿರುವ ಪಿಪಿಇ ಕಿಟ್ ನೀಡುವಂತೆ ಸೂಚನೆ ನೀಡಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ ದೈಹಿಕ ಅಂತರವನ್ನು ಪಾಲಿಸಿ ಈ ಮೂಲಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಿ ಎಂದು ಸಚಿವ ಸೋಮಣ್ಣ ಕೊಡಗಿನ ಜನತೆಯಲ್ಲಿ ಮನವಿ ಮಾಡಿದರು.
ಇದೇ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು ತಾಲೂಕು ಮಟ್ಟದಲ್ಲಿಯೂ ಮುಂದಿನ ದಿನಗಳಲ್ಲಿ ವಾರ್ ರೂಮ್ಗಳನ್ನು ತೆರೆಯುವ ಮೂಲಕ ಸೋಂಕಿತರು ಹೋಮ್ ಐಸೋಲೇಶನ್ನ್ನಲ್ಲಿ ಇದ್ದರೇ ಅವರಿಗೆ ಕರೆಮಾಡಿ ಯೋಗಕ್ಷೇಮ ವಿಚಾರಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಲಿಂಡರ್ ಕೊರತೆ ಇಲ್ಲ
ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್ನ ಕೊರತೆ ಇಲ್ಲ. ಈಗಾಗಲೆ ರಾಜ್ಯದ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಲಿಂಡರ್ಗಳು ಜಿಲ್ಲೆಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹೇಳಿದರು.
ವೀರಾಜಪೇಟೆ ಸರ್ಕಾರಿ ಆಸ್ಪತ್ರೆ, ಕುಟ್ಟ, ಪಾಲಿಬೆಟ್ಟ, ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ೫೦ ಆಮ್ಲಜನಕ ಇರುವ ಹಾಸಿಗೆಯನ್ನು ಕಾಯ್ದಿರಿಸಲಾಗಿದೆ. ಪಾಸಿಟಿವ್ ಬಂದAತಹ ರೋಗಿಗಳು ಮನೆಯಲ್ಲಿಯೆ ಇದ್ದು ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲದಿದ್ದರೆ ಮುರಾರ್ಜಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಬಹುದು. ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೧೦೯೯ ಸೊಂಕಿತರಿದ್ದಾರೆ, ಎಲ್ಲಾರು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೆರಂಬಾಡಿ ಕೋವಿಡ್ ಕೇರ್ ಸೆಂಟರ್ನಲ್ಲಿ ಒಟ್ಟು ೪೯ ಸೊಂಕಿತರು ದಾಖಲಾಗಿದ್ದು, ೬ ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ೬ ಜನರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ೩೭ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜನಕ್ಕೆ ಉಪಯೋಗವಾಗು ವಂತಹ ಯಾವುದೇ ಸಲಕರಣೆಗಳು ರಾಜ್ಯದಿಂದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಬಂದರೆ ಅದನ್ನು ತಿರಸ್ಕರಿಸದೆ ತೆಗದುಕೊಳ್ಳಿ. ಬಂದಿರುವ ಸಲಕರಣೆಗಳು ಯಾವುದೆಂದು ನನ್ನ ಗಮನಕ್ಕೆ ತನ್ನಿ. ನನ್ನ ಗಮನಕ್ಕೆ ತಾರದೆ ಯಾವುದೇ ಕೆಲಸ ನಿರ್ವಹಿಸಿದರೆ ನಾನು ಕ್ಷಮಿಸಲ್ಲ ಎಂದು ಅಧಿಕಾರಿಗಳಿಗೆ ಸೋಮಣ್ಣ ತಾಕೀತು ಮಾಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ವೀರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ೧೪೪ ಜನ ಸೊಂಕಿತರಿದ್ದು, ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಅವರಿಗೆ ಮಾತ್ರೆಗಳನ್ನು ಒದಗಿಸಲು ದಾದಿಯರ ಕೊರತೆ ಇದೆ ಎಂದು ಸಚಿವರ ಗಮನ ಸೆಳೆದಾಗ ಸರ್ಕಾರದ ಕಾನೂನಿನ ಪ್ರಕಾರ ಅಗತ್ಯ ಇರುವ ದಾದಿಯರನ್ನು ನೇಮಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಚಾರುಲತ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಮತ್ತಿತರರು ಈ ಸಂದರ್ಭ ಹಾಜರಿದ್ದರು.