ಮಡಿಕೇರಿ, ಮೇ ೫: ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ನೂರುನ್ನಿಸಾ ಅವರು ಕೊಡಗು ಜಿಲ್ಲೆಯಲ್ಲಿ ೩ ವರ್ಷಗಳ ಅವಧಿಗೆ ಸೇವೆಯನ್ನು ಮಾಡಿ ಇದೀಗ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿಗೆ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಆಗಿ ವರ್ಗಾವಣೆಗೊಂಡಿದ್ದಾರೆ. ೩ ವರ್ಷದ ಅಧಿಕಾರಾವಧಿಯಲ್ಲಿ ವೃದ್ಧಾಶ್ರಮಗಳಿಗೆ ಬಾಲಕರ ಬಾಲ ಮಂದಿರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ಸಹಾಯ ಹಸ್ತ ನೀಡಿರುತ್ತಾರೆ. ಅವರ ಈ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಶ್ರೀಶಕ್ತಿ ವೃದ್ಧಾಶ್ರಮ ಹಾಗೂ ಬ್ಲಡ್ ಡೋನರ್ಸ್ ವತಿಯಿಂದ ಕಿರುಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಕೊಡಗಿನಲ್ಲಿ ಸಲ್ಲಿಸಿದ ಸೇವೆಯ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ನೂರುನ್ನೀಸಾ ಅವರು ಕೊಡಗಿನಲ್ಲಿ ಜನಸೇವೆ ಮಾಡಲು ಉತ್ತಮ ಅವಕಾಶಗಳು ಸಿಕ್ಕಿದ್ದು, ಇಲ್ಲಿಂದ ಬಹಳಷ್ಟು ಅನುಭವಗಳೊಂದಿಗೆ ಇಲ್ಲಿನ ಜನರ ಸಮಸ್ಯೆಗೆ ಸ್ಪಂದನ ನೀಡಿದ ತೃಪ್ತಿಯೊಂದಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.