ಮಡಿಕೇರಿ, ಮೇ ೫: ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ಹಾಗೂ ಹುಲಿ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸುವದಾಗಿ ಭರವಸೆ ಮೇಲೆ ಭರವಸೆಗಳನ್ನೇ ಕೊಡುತ್ತಾ ಸಾಗಹಾಕುತ್ತಿರುವ ಅರಣ್ಯ ಇಲಾಖಾ ಸಚಿವ ಅರವಿಂದ ಲಿಂಬಾವಳಿ ಅವರು ಅರಣ್ಯ ಇಲಾಖಾ ವಸತಿಗೃಹದಲ್ಲಿಯೇ ಉಳಿದುಬಿಟ್ರಾ..!?

ಹೀಗೊಂದು ಪ್ರಶ್ನೆ ಜಿಲ್ಲೆಯ ಜನತೆಯನ್ನು ಕಾಡುತ್ತಲೇ ಇದೆ. ಅರಣ್ಯ ಇಲಾಖೆಗೆ ಅರವಿಂದ ಲಿಂಬಾವಳಿ ಅವರು ಸಚಿವರಾದ ಬಳಿಕ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವಾರು ಮಂದಿ ಅಂಗವಿಹೀನರಾಗಿದ್ದಾರೆ. ಇದರೊಂದಿಗೆ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಮೂವರ ಪ್ರಾಣಹಾನಿಯಾಗಿದ್ದು, ನೂರಾರು ಸಂಖ್ಯೆಯಲ್ಲಿ ರೈತರು ಸಾಕಿ ಸಲಹಿದ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವದರೊಂದಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ರೈತಪರ ಸಂಘಟನೆಗಳು, ಸಾರ್ವಜನಿಕರು ಆಹೋರಾತ್ರಿ ಪ್ರತಿಭಟನೆಗಳನ್ನು ನಡೆಸಿದಲ್ಲದೆ, ಬೆಂಗಳೂರು ಚಲೋ ಹಮ್ಮಿಕೊಂಡು ಸರಕಾರದ ಗಮನ ಸೆಳೆಯಲಾಗಿತ್ತು. ಸರಕಾರದಿಂದ ಪ್ರಾಣ ಹಾನಿಗೆ ಕಾರಣವಾಗಿದ್ದ ಹುಲಿಯನ್ನು ಕೊಲ್ಲಲು ಅನುಮತಿ ಸಿಕ್ಕಿದ ಬಳಿಕ ಒಂದು ಹುಲಿಯನ್ನು ಕೊಂದು ಮತ್ತೊಂದು ಹುಲಿಯನ್ನು ಸೆರೆ ಹಿಡಿಯಲಾಯಿತು. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಮತ್ತೆ ಹುಲಿ ದಾಳಿ ಮುಂದುವರಿದರೆ, ಕಾಡಾನೆ ಹಾವಳಿ ಸರ್ವೇ ಸಾಮಾನ್ಯವಾಗಿದೆ.

ಸಚಿವರ ಭರವಸೆ

ಜಿಲ್ಲೆಯಲ್ಲಿ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಕಳೆದ ಏಪ್ರಿಲ್ ೧೧ ರಂದು ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಬಂಡಿಪುರ ಅರಣ್ಯ ವಸತಿಗೃಹದಲ್ಲಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಜಿಲ್ಲೆಗೆ ಆಗಮಿಸಿ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದರು. ದೂರವಾಣಿ ಮೂಲಕ ಶಾಸಕ ಕೆ.ಜಿ. ಬೋಪಯ್ಯ ಅವರೂ ಕೂಡ ಜಿಲ್ಲೆಗೆ ಭೇಟಿ ನೀಡುವಂತೆ ಕೋರಿಕೊಂಡ ಮೇರೆಗೆ ಮುಂದಿನ ಒಂದು ವಾರದಲ್ಲಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿ, ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದರು.

ಆದರೆ ಇದೀಗ ಸಚಿವರ ಭರವಸೆಯ ಗಡಿ ಒಂದು ವಾರವನ್ನು ದಾಟಿ ತಿಂಗಳಾಗುತ್ತಾ ಬಂದಿದೆ. ಸಚಿವರ ಭೇಟಿಯೂ ಇಲ್ಲ, ಇತ್ತ ಬರಲಾಗದಕ್ಕೆ ಯಾವದೇ ಮಾಹಿತಿಯೂ ಇಲ್ಲ. ಸಚಿವರು ಬರುತ್ತಾರೆ., ಅವರೊಂದಿಗೆ ಸಮಸ್ಯೆಗಳನ್ನು ತೊಡಿಕೊಳ್ಳಬಹುದೆಂಬ ಮಹದಾಸೆಯೊಂದಿಗೆ ಕಾದು ಕುಳಿತಿರುವ ವನ್ಯ ಪ್ರಾಣಿಗಳಿಂದ ತೊಂದರೆ, ಸಾವು-ನೋವು ಅನುಭವಿಸಿರುವ ಜಿಲ್ಲೆಯ ಮುಗ್ಧ ಜನರಿಗೆ ನಿರಾಸೆಯೇ ಗತಿಯಾಗಿದೆ. ಒಂದಿಷ್ಟು ಸಮಾಧಾನಪಟ್ಟುಕೊಳ್ಳುವ ವಿಚಾರವೆಂದರೆ ವನ್ಯಪ್ರಾಣಿಗಳಿಂದ ಸಾವಿಗೀಡಾಗುವ ಜಾನುವಾರುಗಳಿಗೆ ಪರಿಹಾರದ ಮೊತ್ತದಲ್ಲಿ ರೂ. ೧೦ ಸಾವಿರದಿಂದ ೭೫ ಸಾವಿರದವರೆಗೆ ಹಾಗೂ ಆಡು, ಕುರಿ, ಮೇಕೆಗಳಿಗೆ ರೂ. ೫ ಸಾವಿರದಿಂದ ೧೦ ಸಾವಿರದವರೆಗೆ ಏರಿಕೆ ಮಾಡಿರುವದು.

ರಾಜ್ಯದಲ್ಲೇ ಅತಿ ಹೆಚ್ಚು ವನ್ಯ ಪ್ರಾಣಿಗಳ ಹಾವಳಿಯನ್ನೆದುರಿಸುತ್ತಿರುವ ಪುಟ್ಟ ಜಿಲ್ಲೆಯಾಗಿದ್ದು, ಕನಿಷ್ಟ ಸೌಜನ್ಯಕ್ಕಾದರೂ ಸಚಿವರು ಇಲ್ಲಿಗೆ ಬಂದು ಒಂದಿಷ್ಟು ಕಣ್ಣೀರು ಒರೆಸುವ ಕಾರ್ಯವನ್ನಾದರೂ ಮಾಡಿದರೆ ಅಸಹಾಯಕ ಜನತೆಗೊಂದಿಷ್ಟು ಸಮಾಧಾನವಾದರೂ ಆಗಬಹುದೇನೋ..? - ಸಂತೋಷ್