ಮಡಿಕೇರಿ, ಮೇ ೫ : ಇತ್ತೀಚೆಗೆ ಪ್ರಕಟಗೊಂಡ ಮಡಿಕೇರಿ ನಗರಸಭೆ ಚುನಾವಣೆಯ ಫಲಿತಾಂಶ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಇವಿಎಂ ಯಂತ್ರದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿ ಪರಾಜಿತ ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಒಂದನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿ ಅನಿತಾ ಕೆ.ಕೆ, ೨ನೇ ವಾರ್ಡ್ನÀ ಜೆಡಿಎಸ್ ಅಭ್ಯರ್ಥಿ ಲೀಲಾಶೇಷಮ್ಮ, ೮ ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ಭಾರತೀ ರಮೇಶ್, ೯ ನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿ ಸಲ್ಮಾ, ೧೫ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಸ್ವರ್ಣಲತಾ, ೧೭ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ಶರತ್ ಹಾಗೂ ೧೯ ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ಸುನೀಲ್ ನಂಜಪ್ಪ ಅವರುಗಳು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಮತದಾರರು ನಮಗೆ ಮತ ನೀಡಿರುವುದಾಗಿ ಹೇಳುತ್ತಿದ್ದಾರೆ, ಆದರೆ ನಮಗೆ ಕೆಲವೇ ಮತಗಳು ಲಭಿಸಿವೆ ಎಂದು ಫಲಿತಾಂಶ ಹೇಳುತ್ತಿದೆ. ಮತಯಂತ್ರದಲ್ಲಿ ತಾಂತ್ರಿಕ ಅಡಚಣೆ ಉಂಟಾಗಿ ಕೆಲವು ನಿಮಿಷಗಳ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವೆಲ್ಲವೂ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಇವಿಎಂ ಯಂತ್ರದ ಬಗ್ಗೆ ತನಿಖೆಯಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.