ವರದಿ - ಚಂದ್ರ ಮೋಹನ್ ಕುಶಾಲನಗರ, ಮೇ ೩: ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಾವಳಿ ಶಾಶ್ವತವಾಗಿ ತಪ್ಪಿಸಲು ಅರಣ್ಯ ಇಲಾಖೆ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಇದೀಗ ಮುಂದಿನ ಕಾಮಗಾರಿಗೆ ಕೊರೊನಾ ತೊಡಕುಂಟುಮಾಡಿದೆ. ಕಾಮಗಾರಿ ನಡೆಸಲು ಆಕ್ಸಿಜನ್ ಟ್ಯಾಂಕ್ ಕೊರತೆ ಎದುರಾಗಿದ್ದು, ಬ್ಯಾರಿಕೇಡ್ ನಿರ್ಮಾಣಕ್ಕೆ ಅವಶ್ಯವಿರುವ ವೆಲ್ಡಿಂಗ್, ಕಂಬ ತುಂಡರಿಸುವ, ಮತ್ತಿತರ ಕೆಲಸ ಸ್ಥಗಿತಗೊಂಡಿದೆ. ವಾಣಿಜ್ಯ ಚಟುವಟಿಕೆ ಗಳಿಗೆ ಆಕ್ಸಿಜನ್ ಟ್ಯಾಂಕ್‌ಗಳ ಬಳಕೆಗೆ ಸರ್ಕಾರ ನಿರ್ಬಂಧ ಹಾಕಿರುವ ಹಿನ್ನೆಲೆ ಇದೀಗ ಈ ಕಾಮಗಾರಿ ಪೂರ್ಣ ಗೊಳಿಸಲು ಅನಾನುಕೂಲ ಉಂಟಾಗಿದೆ (ಮೊದಲ ಪುಟದಿಂದ) ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ.ನೆರೆಯ ಅರಣ್ಯ ವ್ಯಾಪ್ತಿಯಿಂದ ಕಾವೇರಿ ನದಿ ದಾಟಿ ಮೀನುಕೊಲ್ಲಿ ಅರಣ್ಯ ಪ್ರದೇಶಗಳ ಅಂಚಿನಲ್ಲಿರುವ ವಾಲ್ನೂರು,ನಂಜರಾಯಪಟ್ಟಣ ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತಿದ್ದ ಕಾಡಾನೆಗಳ ಹಾವಳಿ ತಪ್ಪಿಸಲು ಈ ಯೋಜನೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಅರಣ್ಯ ಇಲಾಖೆ ಮೂಲಕ ಕೈಗೊಂಡಿರುವ ಈ ಯೋಜನೆ ಸಿದ್ದಾಪುರ ಸಮೀಪದ ಬರಡಿಯಿಂದ ರಂಗಸಮುದ್ರದ ತನಕ ಸುಮಾರು ೮.೫ ಕಿ.ಮೀ. ಉದ್ದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಅಂದಾಜು ೪.೫೬ ಕೋಟಿ ರೂಗಳ ಅನುದಾನ ದಲ್ಲಿ ನಡೆಯುತ್ತಿರುವ ಕಾಮಗಾರಿ ಶೇ.೭೫ ರಷ್ಟು ಪೂರ್ಣಗೊಂಡಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ.ಅನನ್ಯಕುಮಾರ್ ‘ಶಕಿ’್ತ ಗೆ ತಿಳಿಸಿದ್ದಾರೆ. ಬ್ಯಾರಿಕೇಡ್ ಅಳವಡಿಸುವ ಪ್ರದೇಶಗಳ ೧೧ ಕಡೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಇದನ್ನು ಸ್ಥಳಾಂತರಿಸಲು ಕೆಪಿಟಿಸಿಎಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಬೇಸಿಗೆಯ ಅವಧಿಯಲ್ಲಿ ಮಾಲ್ದಾರೆ,ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯಿಂದ ಕಾವೇರಿ ನದಿ ದಾಟಿ ವಾಲ್ನೂರು,ನಂಜರಾಯಪಟ್ಟಣ ಗ್ರಾಮಗಳಿಗೆ ದಾಳಿ ಇಡುತ್ತಿರುವ ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಈ ಯೋಜನೆ ಸಿದ್ದಗೊಳ್ಳುತ್ತಿದೆ. ಮೀನುಕೊಲ್ಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು ೩೫-೪೦ ಕಾಡಾನೆಗಳು ನೆಲೆಯೂರಿದ್ದು, ಇವುಗಳಿಂದ ಸುತ್ತಮುತ್ತ ವ್ಯಾಪ್ತಿಯ ಬೆಳೆಹಾನಿ ಉಂಟಾಗುವುದರೊAದಿಗೆ ನೆರೆ ಅರಣ್ಯಗಳಿಂದ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಈ ಪ್ರದೇಶದ ಕೃಷಿಕರಿಗೆ ಕಂಟಕವಾಗಿದೆ. ಸ್ಥಳೀಯ ಆನೆಗಳು ಕೃಷಿ ಪ್ರದೇಶಕ್ಕೆ ನುಗ್ಗದಂತೆ ಅರಣ್ಯದ ಅಂಚಿನಲ್ಲಿ ಹ್ಯಾಂಗಿAಗ್ ಸೋಲಾರ್ ಫೆನ್ಸಿಂಗ್ ಅಳವಡಿಸಲಾಗಿದ್ದು ಈ ಮೂಲಕ ಆನೆ ಹಾವಳಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೀನುಕೊಲ್ಲಿ ವಿಭಾಗದ ಉಪಅರಣ್ಯ ವಲಯಾಧಿಕಾರಿ ಸುಬ್ರಾಯ ಅವರು ‘ಶಕ್ತಿ’ಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ..

ದುಬಾರೆ ಸಾಕಾನೆ ಶಿಬಿರದ ಎದುರುಗಡೆ ಕೂಡ ಈ ಕಂಬಿ ಅಳವಡಿಸುವ ಕಾಮಗಾರಿ ನಡೆದಿದ್ದು, ಸ್ಥಳೀಯರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಕೆಲವು ಗೇಟ್‌ಗಳನ್ನು ಅಳವಡಿಸಲಾಗುವುದು ಎಂದು ಸುಬ್ರಾಯ ಮಾಹಿತಿ ಒದಗಿಸಿದ್ದಾರೆ.

ಇನ್ನೆರಡು ತಿಂಗಳಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಈ ವ್ಯಾಪ್ತಿಯ ಆನೆಮಾನವ ಸಂಘರ್ಷಕ್ಕೆ ಶಾಶ್ವತ ಅಂತ್ಯ ದೊರಕುವ ಆಶಾಭಾವನೆಯಲ್ಲಿ ಈ ಭಾಗದ ಕೃಷಿಕರು ದಿನದೂಡುತ್ತಿದ್ದಾರೆ.