ಶನಿವಾರಸಂತೆ, ಮೇ ೨: ಪಟ್ಟಣದಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು, ಸಂತೆ ಮಾರುಕಟ್ಟೆ ಹೊರಭಾಗದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿ, ಹಣ್ಣು ಹಂಪಲು, ದಿನಸಿ ಸಾಮಗ್ರಿ ಖರೀದಿಸಲು ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡುಬAತು.

ಬೀಗ ಜಡಿದಿರುವ ಮಾರುಕಟ್ಟೆಯ ಹೊರಭಾಗದಲ್ಲಿ ರಸ್ತೆಯ ೨ ಬದಿಯಲ್ಲೂ ಸಂತೆ ರೀತಿಯಲ್ಲೇ ತರಕಾರಿ, ಹಣ್ಣು ಹಂಪಲು, ಬೇಕರಿ, ಒಣಮೀನಿನ ಅಂಗಡಿ, ಪ್ಲಾಸ್ಟಿಕ್ ಅಂಗಡಿಗಳನ್ನು ತೆರೆದು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಸರ್ಕಾರದ ಮಾರ್ಗಸೂಚಿ ಮರೆತ ಗ್ರಾಹಕರು ಅಂತರ ಕಾಯ್ದುಕೊಳ್ಳದೇ ಕೆಲವರು ಮಾಸ್ಕ್ ಧರಿಸದೆ ಸಾಮಗ್ರಿ ಖರೀದಿಯಲ್ಲೇ ಮಗ್ನರಾಗಿದ್ದರು.

ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದ್ದುದರಿಂದ ಅಧಿಕಾರಿ ವರ್ಗದವರು ಕಂಡುಬರಲಿಲ್ಲ. ಕೆಲ ಸಮಯದ ಬಳಿಕ ಪೊಲೀಸರು, ಗ್ರಾಮ ಪಂಚಾಯಿತಿ ನೌಕರರು ಸ್ಥಳಕ್ಕೆ ಧಾವಿಸಿ ವ್ಯಾಪಾರಿಗಳನ್ನು ಅಂಗಡಿ ಸಮೇತ ಖಾಲಿ ಮಾಡಿಸಿದರು. ೧೦ ಗಂಟೆಯ ಬಳಿಕ ಇಡೀ ಪಟ್ಟಣ ಸ್ತಬ್ಧವಾಯಿತು.